`ಹಿರಿಯರ ಸೇವೆ ದೇವರ ಪೂಜೆಗೆ ಸಮ’ ಎಂದು ಶಿರಸಿ ಉಪವಿಭಾಗೀಯ ದಂಡಾಧಿಕಾರಿ ಚಂದ್ರಶೇಖರ್ ಆರ್ ಜಿ ಅವರು ಹೇಳಿದ್ದಾರೆ.
ಧಾರವಾಡದ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಸ್ಥೆಯ ರಾಜ್ಯ ಉಪಾಧ್ಯಕ್ಷ ಎಸ್ ಎಸ್ ಭಟ್ ಲೋಕೇಶ್ವರ ಅವರ ಆಶಯದಂತೆ ಸ್ಕೋಡ್‌ವೆಸ್ ಸಹಯೋಗದಲ್ಲಿ ಸುಯೋಗಾಶ್ರಮದಲ್ಲಿ ಆಯೋಜಿಸಿದ್ದ `ಹೊದೆಯಲೊಂದು ರಗ್ಗು – ಕುಡಿಯಲೊಂದು ಮಗ್ಗು’ ಎಂಬ ಕಾರ್ಯಕ್ರಮದಲ್ಲಿ ಚಂದ್ರಶೇಖರ್ ಆರ್ ಜಿ ಅವರು ಭಾಗವಹಿಸಿದ್ದಾರೆ. ಕಾರ್ಯಕ್ರಮ ಉದ್ಘಾಟಿಸಿದ ಅವರು `ಆಧುನಿಕತೆಯ ಪೈಪೋಟಿಯಲ್ಲಿ ಪ್ರತಿಭೆಗಳು ಅವಕಾಶಗಳ ಬೆನ್ನತ್ತಿ ಹೋಗುತ್ತಿರುವುದರಿಂದ ಹಿರಿಯರ ಇಳಿ ವಯಸ್ಸಿನ ಸಮಸ್ಯೆಗಳಿಗೆ ವೃದ್ಧಾಶ್ರಮಗಳು ಮಾತ್ರ ಪರಿಹಾರ ಒದಗಿಸಬಲ್ಲದು. ಹೀಗಾಗಿ ವೃದ್ಧಾಶ್ರಮಗಳ ಬಲರ್ಧನೆಗೆ ಎಲ್ಲರೂ ಕೈ ಜೋಡಿಸಬೇಕು’ ಎಂದು ಕರೆ ನೀಡಿದ್ದಾರೆ.
ಸ್ಕೋಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ ಅವರು ಈ ವೇಳೆ ಸೋಲಾರ್ ದೀಪವನ್ನು ಉದ್ಘಾಟಿಸಿದ್ದಾರೆ. ನಂತರ ಮಾತನಾಡಿದ ಅವರು ಪರಿಸರ ಸ್ನೇಹಿ ಹಾಗೂ ನವೀಕರಿಸಬಹುದಾದ ಇಂಧನ ಬಳಕೆಯ ಮಹತ್ವವನ್ನು ವಿವರಿಸಿದ್ದಾರೆ. ಎಸ್. ಎಸ್. ಭಟ್ಟ ಲೋಕೇಶ್ವರ ಅವರ ಸಾಮಾಜಿಕ ಸೇವಾ ಕಾರ್ಯಗಳನ್ನು ಈ ಸಭೆ ಸ್ಮರಿಸಿದ್ದು, `ಅವರ ಇಂಥ ಪ್ರಯತ್ನಗಳು ಇತರರಿಗೆ ಮಾದರಿಯಾಗಲಿ’ ಎಂದು ಸಭೆಯಲ್ಲಿದ್ದವರು ಆಶಿಸಿದರು.
ಸ್ಕೋಡ್‌ವೆಸ್ ಮುಖ್ಯ ಹಣಕಾಸು ಮತ್ತು ಆಡಳಿತಾಧಿಕಾರಿ ಸರಸ್ವತಿ ಎನ್ ರವಿ, ಯಡಳ್ಳಿ ಕಾಲೇಜಿನ ಶಿಕ್ಷಣ ಸಮಿತಿ ಅಧ್ಯಕ್ಷರಾದ ಆರ್ ವಿ ಹೆಗಡೆ ಮತ್ತು ಸುಯೋಗಾಶ್ರಮದ ಮುಖ್ಯಸ್ಥರಾದ ಲತಿಕಾ ಭಟ್ ಕಾರ್ಯಕ್ರಮದಲ್ಲಿದ್ದರು. ಸ್ಕೋಡ್‌ವೆಸ್ ಕಾರ್ಯಕ್ರಮಾಧಿಕಾರಿ ನಾರಾಯಣ ಹೆಗಡೆ ತಮ್ಮ ಜವಾಬ್ದಾರಿ ನಿಭಾಯಿಸಿದ್ದು, ಸುಯೋಗಾಶ್ರಮದ ಎಲ್ಲಾ ಹಿರಿಯ ಚೇತನರಿಗೆ ಉಚಿತವಾಗಿ ರಗ್ಗು ಮತ್ತು ಮಗ್ಗುಗಳನ್ನು ವಿತರಿಸಲಾಯಿತು.