ಸ್ಕೂಟಿ ಸವಾರ ಇಂಡಿಕೇಟರ್ ಹಾಕದೇ ಸ್ಕೂಟಿಯನ್ನು ಬಲಕ್ಕೆ ತಿರುಗಿಸಿದ ಕಾರಣ ಹೊನ್ನಾವರದ ಕಾಸರಕೋಡು ಟೊಂಕಾದ ಬಳಿ ಹೊಡೆದಾಟ ನಡೆದಿದೆ. ಕಾರಿನಲ್ಲಿದ್ದ ಕೆಲವರು ಸ್ಕೂಟಿ ಸವಾರನ ಜೊತೆ ವಾಗ್ವಾದ ನಡೆಸಿದ್ದು, ಇದೇ ವಿಷಯ ದೊಡ್ಡದಾಗಿ ಹೊಡೆದಾಟಕ್ಕೆ ಕಾರಣವಾಗಿದೆ.
ಫೆಬ್ರವರಿ 8ರಂದು ಕಾಸರಕೋಡು ಟೊಂಕಾದ ಬಳಿ ಈ ಹೊಡೆದಾಟ ನಡೆದಿದೆ. ಪೊಲೀಸ್ ಸಿಬ್ಬಂದಿ ರವಿ ಹನುಮಂತ ನಾಯ್ಕ ಅವರು ಈ ಹೊಡೆದಾಟ ನೋಡಿದ್ದಾರೆ. ಹೊಡೆದಾಟ ತಪ್ಪಿಸುವ ಪ್ರಯತ್ನ ಮಾಡಿದರೂ ಅದು ಸಾಧ್ಯವಾಗಿಲ್ಲ. ಸಾರ್ವಜನಿಕ ಪ್ರದೇಶದಲ್ಲಿ ಹೊಡೆದಾಟ ನಡೆಸಿದವರ ವಿರುದ್ಧ ಅವರು ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಶಿರಾಲಿ ಚಿತ್ರಾಪುರದ ಚಾಲಕ ರಾಘವೇಂದ್ರ ರಾಮಚಂದ್ರ ನಾಯ್ಕ ಹಾಗೂ ಕಾಸರಕೋಡು ಟೊಂಕಾದ ಕ್ಯಾಟರಿಂಗ್ ಕೆಲಸ ಮಾಡುವ ಮಹಮದ್ ಜುನೈದ್ ಬಾಬುಲ್ ಸಾಬ್, ಪೈಯಾಜ್ ಅಬುಕರ್ ಸಯ್ಯದ್, ಸುಲೇಮಾನ್ ಹಸನ್ ಸಾಬ್, ಜೊತೆಗೆ ಮೂರು ಜನ ಇಲ್ಲಿ ಪರಸ್ಪರ ಕೈ ಕೈ ಮಿಲಾಯಿಸಿಕೊಂಡವರಾಗಿದ್ದಾರೆ. ಸ್ಕೂಟಿ ಸವಾರ ಹಾಗೂ ಕಾರಿನಲ್ಲಿದ್ದವರ ನಡುವೆ ನಡೆದ ಹೊಡೆದಾಟಕ್ಕೆ ಮತ್ತೆ ಮೂವರು ಕೈ ಜೋಡಿಸಿದ್ದಾರೆ. ಇದರಿಂದ ಸ್ಥಳದಲ್ಲಿ ಗೊಂದಲ ವಾತಾವರಣ ಸೃಷ್ಠಿಯಾಗಿದ್ದು, ಜನರು ಆತಂಕಕ್ಕೆ ಒಳಗಾಗಿದ್ದರು.
ಪೊಲೀಸ್ ಸಿಬ್ಬಂದಿ ರವಿ ನಾಯ್ಕ ಅವರು ಹೊಡೆದಾಟದಲ್ಲಿ ಭಾಗವಹಿಸಿದ ಎಲ್ಲರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಅವರೆಲ್ಲರ ಹೆಸರು ಸೇರಿಸಿ ಪೊಲೀಸ್ ಪ್ರಕರಣವನ್ನು ದಾಖಲಿಸಿದ್ದಾರೆ.