ಸಿದ್ದಾಪುರದ ವಸಂತ ನಾಯ್ಕ ಅವರ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಟಿವಿ ಜ್ಯೋತಿಷಿ ಕಮಲಾಕರ ಭಟ್ಟರಿಗೆ ನ್ಯಾಯಾಲಯ ಜಾಮೀನು ನೀಡಿಲ್ಲ. ಫೆ 21ರವರೆಗೆ ಅವರ ನ್ಯಾಯಾಂಗ ಬಂಧನ ವಿಸ್ತರಣೆಯಾಗಿದ್ದು, ಜ್ಯೋತಿಷಿ ಜೊತೆ ಅವರ ಸಹಚರರಿಗೂ ಅಲ್ಲಿಯವರೆಗೆ ಜೈಲೂಟ ಸೇವನೆ ಅನಿವಾರ್ಯವಾಗಿದೆ.
ಜ್ಯೋತಿಷಿ ಕಮಲಾಕರ ಭಟ್ಟ ಹಾಗೂ ಅವರ ಪ್ರೇಯಸಿ ಸುಚಿತ್ರಾ ಸೇರಿ ಐವರು ಆರೋಪಿತರನ್ನು ಬುಧವಾರ ನ್ಯಾಯಾಧೀಶರು ವಿಡಿಯೋ ಕಾನ್ಪರೆನ್ಸಿನ ಮೂಲಕ ವಿಚಾರಣೆ ಮಾಡಿದ್ದಾರೆ. ಅದಾದ ನಂತರ ಅವರ ಮನವಿಯನ್ನು ತಿರಸ್ಕರಿಸಿ ನ್ಯಾಯಾಂಗ ಬಂಧನವನ್ನು ವಿಸ್ತರಿಸಿದ್ದಾರೆ. ವಸಂತ ನಾಯ್ಕ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸುಜಿತ್ರಾ ಜೊತೆ ಅವರ ತಂದೆ ಲೋಕನಾಥ, ಪ್ರಿಯತಮ ಕಮಲಾಕರ ಭಟ್ಟ ಹಾಗೂ ಜೊತೆಗಾರರಾದ ಆಕಾಶ್ ವಿನಯ್ ಅವರ ಬಂಧನದ ಅವಧಿ ವಿಸ್ತರಿಸಿ ನ್ಯಾಯಾಲಯ ಆದೇಶಿಸಿದೆ. ಪ್ರಕರಣದ ಗಂಭೀರತೆ ಅರಿತು ಈ ಆದೇಶ ಮಾಡಲಾಗಿದೆ.
ಇದರೊಂದಿಗೆ ಇದೇ ಪ್ರಕರಣದಲ್ಲಿ ಇತರೆ ಮೂವರು ಆರೋಪಿಗಳಾದ ಮಹ್ಮದ್ ಮೆಹಫೂಪ್, ಮಹ್ಮದ್ ಫೈಸಲ್ ಮತ್ತು ಇರ್ಫಾನ್ ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಅವರಿಂದ ಕೊಲೆಗೆ ಬಳಸಲಾದ ಮಾರಕಾಸ್ತ್ರಗಳ ಪತ್ತೆ ಹಾಗೂ ಸ್ಥಳ ಮಹಜರು ಪ್ರಕ್ರಿಯೆ ನಡೆಸಲಾಗಿದ್ದು, ಆರೋಪಿತರನ್ನು ಶಿವಮೊಗ್ಗಕ್ಕೆ ಕರೆದೊಯ್ದು ಪಂಚನಾಮೆ ನಡೆಸಲಾಗುತ್ತದೆ.