ಹೊನ್ನಾವರದ ಶರಾವತಿ ಪಂಪ್ಡ ಸ್ಟೋರೇಜ ಯೋಜನೆಗೆ 54.155 ಹೆಕ್ಟೇರ ಅರಣ್ಯ ಭೂಮಿ ಬಳಸಿಕೊಳ್ಳಲು ಉದ್ದೇಶಿಸಲಾಗಿದ್ದು, ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿರ್ಧಾರವೇ ಅಂತಿಮ ಎಂದು ಅರಣ್ಯ ಇಲಾಖೆ ಹೇಳಿದೆ.
ಈ ವಿಷಯವಾಗಿ ಶಿವಮೊಗ್ಗ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯಿAದ ಹೋರಾಟಗಾರ ಚಂದ್ರಹಾಸ ಕೋಚ್ರೇಕರ್ ಅವರಿಗೆ ಪತ್ರ ಬಂದಿದೆ. `ಶರಾವತಿ ಪಂಪ್ಡ ಸ್ಟೋರೇಜ ಯೋಜನೆಗೆ ಸಂಬAಧಿಸಿದ ಸಾರ್ವಜನಿಕ ಕುಂದುಕೊರತೆ ವಿಷಯವಾಗಿ ಶಿವಮೊಗ್ಗ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಿಂದ ಬರೆದ ಪತ್ರದಲ್ಲಿ ಈ ವಿಷಯದ ಬಗ್ಗೆ ವಿವರಿಸಲಾಗಿದೆ. `ಪಶ್ಚಿಮ ಘಟ್ಟಗಳ ಅರಣ್ಯ ಮತ್ತು ಜೀವ ವೈವಿಧ್ಯಕ್ಕೆ ಹಾನಿಯಾಗುವ ಭೀತಿಯಿಂದ ಸಾರ್ವಜನಿಕರು ಸಲ್ಲಿಸಿದ್ದ ದೂರನ್ನು ಪರಿಶೀಲಿಸಲಾಗಿದ್ದು, ಈ ಕುರಿತಾದ ವಿವರವಾದ ವರದಿ ಈಗಾಗಲೇ ಮೇಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ’ ಎಂದು ಅರಣ್ಯ ಇಲಾಖೆ ತಿಳಿಸಿದೆ.
`ಕರ್ನಾಟಕ ವಿದ್ಯುತ ನಿಗಮದ 2000 ಮೆಗಾ ವ್ಯಾಟ್ ಸಾಮರ್ಥ್ಯದ ಈ ಬ್ರಹತ್ ಯೋಜನೆಗಾಗಿ ಸಾಗರ, ಶಿವಮೊಗ್ಗ ವನ್ಯಜೀವಿ ಮತ್ತು ಹೊನ್ನಾವರ ಅರಣ್ಯ ವಿಭಾಗಗಳ ವ್ಯಾಪ್ತಿಯಲ್ಲಿ ಒಟ್ಟೂ 54.155 ಹೆಕ್ಟೇರ ಅರಣ್ಯ ಭೂಮಿ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಅದರಲ್ಲಿ 14.582 ಹೆಕ್ಟೇರ ಭೂಮಿ ಶಿವಮೊಗ್ಗ ವನ್ಯಜೀವಿ ವಿಭಾಗಕ್ಕೆ ಸೇರಿದ್ದು ಇಲಾಖೆಯು ನಿಯಮಾನುಸಾರ ಸ್ಥಳ ಪರಿಶೀಲನೆ ನಡೆಸಿ 2025ರ ಜೂನ್ 24ರಂದು ವರದಿ ಸಲ್ಲಿಸಿದೆ. ವನಸಂರಕ್ಷಣಾ ಅಧಿನಿಯಮ 1980ರ ಪ್ರಕಾರ ಈ ಯೋಜನೆಯ ಅರಣ್ಯ ಭೂಮಿ ಬಿಡುಗಡೆಗೆ ಕೇಂದ್ರ ಸರ್ಕಾರದ ಪೂರ್ವಾನುಮತಿ ಕಡ್ಡಾಯವಾಗಿದ್ದು ಕೇಂದ್ರದ ನಿರ್ಧಾರವೇ ಈ ವಿಷಯದಲ್ಲಿ ಅಂತಿಮ’ ಎಂದು ಬರೆಯಲಾಗಿದೆ.