17 ಹಾಗೂ 18 ವರ್ಷದ ಬಾಲಕರಿಬ್ಬರು ಸೇರಿ ಕುಮಟಾದ ಪೆಟ್ರೋಲ್ ಬಂಕಿಗೆ ಕನ್ನ ಹಾಕಿದ್ದಾರೆ. ಪೆಟ್ರೊಲ್ ಬಂಕ್ ಕಚೇರಿಗೆ ನುಗ್ಗಿ 25 ಸಾವಿರ ರೂ ಹಣ ಕದ್ದವರನ್ನು ಪೊಲೀಸರು ಬಂಧಿಸಿದ್ದಾರೆ.
ಕುಮಟಾ ಮಾಸೂರು ಕ್ರಾಸಿನ ಬಳಿ ಪೆಟ್ರೋಲ್ ಬಂಕಿನಲ್ಲಿ ಕಳ್ಳತನ ನಡೆದಿತ್ತು. ಪೆಟ್ರೋಲ್ ಬಂಕಿನ ಕಿಟಕಿ ಸರಳು ತುಂಡರಿಸಿದ ಕಳ್ಳರು 25 ಸಾವಿರ ರೂ ಹಣ ಕದ್ದು ಪರಾರಿ ಆಗಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿದ ಕುಮಟಾ ಪೊಲೀಸರು ತನಿಖೆ ಶುರು ಮಾಡಿದರು. ಪೊಲೀಸ್ ನಿರೀಕ್ಷಕ ಯೋಗೇಶ ಕೆ ಎಂ ಅವರ ಜೊತೆ ಪಿಸೈ ರವಿ ಗುಡ್ಡಿ, ಮಯೂರ ಪಟ್ಟಣಶೆಟ್ಟಿ ಹಾಗೂ ಸಾವಿತ್ರಿ ನಾಯಕ ಅವರ ತಂಡ ಶೋಧ ಕಾರ್ಯಾಚರಣೆ ನಡೆಸಿತು.
ಪೊಲೀಸ್ ಸಿಬ್ಬಂದಿ ದಯಾನಂದ ನಾಯ್ಕ, ಗಣೇಶ ನಾಯ್ಕ, ಕಿರಣ ನಾಯ್ಕ, ಪ್ರದೀಪ ನಾಯಕ, ಚಿದಾನಂದ ನಾಯ್ಕ, ಗಿರೀಶ ನಾಯ್ಕ, ಹರೀಶ ನಾಯ್ಕಕ, ಅರುಣ ನಾಯ್ಕ ಅವರು ಜೀಪಿನ ಚಾಲಕ ಮಾರುತಿ ಗಳಪೂಜಿ ಅವರ ಜೊತೆ ಸೇರಿ ಕಳ್ಳರ ಹುಡುಕಾಟ ಮಾಡಿದರು. ಆಗ, ಕುಮಟಾ ವನ್ನಳ್ಳಿ ಬಳಿಯ ಕಲ್ಗುಡ್ಡದ ಅಸ್ಲಂ ಹನೀಪ್ ದಂಡು (18) ಸಿಕ್ಕಿಬಿದ್ದರು. 17 ವರ್ಷದ ಮತ್ತೊಬ್ಬ ಬಾಲಕನ ಜೊತೆ ಸೇರಿ ಕಳ್ಳತನ ಮಾಡಿರುವುದನ್ನು ಅವರು ಒಪ್ಪಿಕೊಂಡರು.
ಆ ಕಳ್ಳರ ಬಳಿಯಿದ್ದ 3 ಲಕ್ಷ ರೂ ಮೌಲ್ಯದ ಎರಡು ಸ್ಕೂಟರ್ ಜೊತೆ ವಿವಿಧ ಆಯುಧ ಹಾಗೂ ಕಳ್ಳತನದ ಹಣವನ್ನು ಪೊಲೀಸರು ವಶಕ್ಕೆಪಡೆದರು. ಕಳ್ಳರ ವಿರುದ್ಧ ಕಾನೂನು ಕ್ರಮ ಜರುಗಿಸಿದರು.