ಶಿರಸಿ-ಹುಬ್ಬಳ್ಳಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಇದರಿಂದ ಆ ಭಾಗದಲ್ಲಿ ಓಡಾಡುವ ಜನ ರೊಚ್ಚಿಗೆದ್ದಿದ್ದಾರೆ. ಜಾತ್ರೆ ಸಮೀಪಿಸಿದರೂ ರಸ್ತೆ ಸರಿಯಾಗಿಲ್ಲ ಎಂಬ ಕಾರಣಕ್ಕೆ ಆಕ್ರೋಶವ್ಯಕ್ತಪಡಿಸಿದ್ದಾರೆ.
ಚಿಪಗಿಯಿಂದ ಬಿಸಲಕೊಪ್ಪದವರೆಗೆ ಸಾಕಷ್ಟು ಪ್ರಮಾಣದಲ್ಲಿ ರಸ್ತೆ ಹಾಳಾಗಿದೆ. ನಿತ್ಯ ಸಾವಿರಾರು ವಾಹನಗಳು ಈ ಮಾರ್ಗದಲ್ಲಿ ಓಡಾಡುತ್ತಿದ್ದು, ಧೂಳಿನಿಂದ ಜನ ತತ್ತರಿಸಿದ್ದಾರೆ. ನಿತ್ಯವೂ ಧೂಳು ತಿನ್ನುವ ಆ ಮಾರ್ಗದ ಅಕ್ಕಪಕ್ಕದ ನಿವಾಸಿಗಳು ಅಸ್ತಮಾ ರೋಗದ ಆತಂಕದಲ್ಲಿದ್ದಾರೆ. ಜಾತ್ರೆ ಸಮೀಪಿಸಿದರೂ ರಸ್ತೆ ದುರಸ್ಥಿ ನಡೆಯದಿರುವುದು ಜನರ ಅಸಮಧಾನಕ್ಕೆ ಕಾರಣವಾಗಿದೆ.
ಈ ಎಲ್ಲಾ ಸಮಸ್ಯೆ ಹಿನ್ನಲೆ ಶಿರಸಿ – ಹುಬ್ಬಳ್ಳಿ ಹೆದ್ದಾರಿ ಮಾರ್ಗದ ಗೌಡಳ್ಳಿ ಬಳಿ ಜನ ದಿಢೀರ್ ಆಗಿ ಪ್ರತಿಭಟನೆ ನಡೆಸಿದ್ದಾರೆ. ಬುಧವಾರ ಸಂಜೆ ಅರ್ದ ಗಂಟೆಗಳ ಕಾಲ ರಸ್ತೆ ಬಂದ್ ಮಾಡಿ ಜನ ಆಕ್ರೊಶ ಹೊರಹಾಕಿದ್ದಾರೆ. ಲಾರಿಗಳ ಜೊತೆ ವಿವಿಧ ವಾಹನಗಳು ಸಾಲುಗಟ್ಟಿ ನಿಂತಿರುವುದನ್ನು ಅರಿತು ಗುತ್ತಿಗೆದಾರರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಅದಾದ ನಂತರ ಜನ ಪ್ರತಿಭಟನೆ ಹಿಂಪಡೆದಿದ್ದು, ಶೀಘ್ರದಲ್ಲಿ ರಸ್ತೆ ರಿಪೇರಿ ನಡೆಯದೇ ಇದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.