ದಿನದ 24 ತಾಸು ಸರಾಯಿ ಸೇವಿಸುತ್ತಿದ್ದ ಸಿದ್ದಾಪುರದ ಶ್ರೀಧರ ಮೊಗೇರ್ ಅವರು 38ನೇ ವಯಸ್ಸಿನಲ್ಲಿಯೇ ಸಾವನಪ್ಪಿದ್ದಾರೆ. `ಸರಾಯಿ ಸೇವನೆ ಒಳ್ಳೆಯದಲ್ಲ’ ಎಂದು ವೈದ್ಯರು ಸೂಚನೆ ನೀಡಿದರೂ ಪಾಲಿಸದ ಅವರು ಸಣ್ಣ ವಯಸ್ಸಿನಲ್ಲಿಯೇ ಭೂಲೋಕದ ಯಾತ್ರೆ ಮುಗಿಸಿದ್ದಾರೆ.
ಸಿದ್ದಾಪುರದ ರವೀಂದ್ರ ನಗರದಲ್ಲಿ ಶ್ರೀಧರ ಮಂಜು ಮೊಗೇರ್ ಅವರು ವಾಸವಾಗಿದ್ದರು. ಕೂಲಿ ಕೆಲಸ ಮಾಡಿಕೊಂಡಿದ್ದ ಅವರು ತಮ್ಮ ದುಡಿಮೆಯ ಹಣವನ್ನು ಸರಾಯಿ ಅಂಗಡಿಗೆ ಕೊಡುತ್ತಿದ್ದರು. ಸರಾಯಿ ನಶೆಯಲ್ಲಿರುವ ಅವಧಿಯಲ್ಲಿ ಅವರು ಊಟ-ತಿಂಡಿಯನ್ನು ಸಹ ಸೇವಿಸುತ್ತಿರಲಿಲ್ಲ. ದುಶ್ಚಟದ ಪರಿಣಾಮವಾಗಿ ಅವರು ವರ್ಷದ ಹಿಂದೆಯೇ ತಮ್ಮ ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದರು. ಅದಾಗಿಯೂ ಅವರು ಕುಡಿತದ ಚಟದಿಂದ ಮಾತ್ರ ಹೊರಬಂದಿರಲಿಲ್ಲ.
ದಿನದ 24 ತಾಸು ಸರಾಯಿ ನಶೆಯಲ್ಲಿಯೇ ಇರುತ್ತಿದ್ದ ಶ್ರೀಧರ ಮೊಗೇರ್ ಅವರಿಗೆ ಸಾಕಷ್ಟು ವೈದ್ಯರು ತಿಳುವಳಿಕೆ ಮೂಡಿಸಿದ್ದರು. ವರ್ಷದ ಹಿಂದೆ ನೆಲಕ್ಕೆ ಬಿದ್ದು ಪೆಟ್ಟು ಮಾಡಿಕೊಂಡಿದ್ದ ಅವಧಿಯಲ್ಲಿಯೂ ವೈದ್ಯರು ಅವರಿಗೆ ಬುದ್ದಿ ಹೇಳಿದ್ದರು. ಮಂಗಳೂರು ಎಜೆ ಆಸ್ಪತ್ರೆಗೆ ದಾಖಲಾದಾಗ ಅಲ್ಲಿನ ವೈದ್ಯರು ಸರಾಯಿ ಕುಡಿಯದಂತೆ ಸೂಚನೆಯನ್ನು ನೀಡಿದ್ದರು. ಆದರೆ, ವೈದ್ಯರ ಮಾತನ್ನು ಕೇಳುವ ಪರಿಸ್ಥಿತಿಯಲ್ಲಿ ಶ್ರೀಧರ ಮೊಗೇರ್ ಅವರಿರಲಿಲ್ಲ.
ಫೆ 10ರಂದು ಸಿದ್ದಾಪುರದ ಕೊಡ್ಲಿಯಲ್ಲಿ ಸಣ್ಣ ಪುಟ್ಟ ಕೆಲಸ ಮಾಡುವಾಗಲೂ ಶ್ರೀಧರ ಮೊಗೇರ್ ಅವರು ಸರಾಯಿ ನಶೆಯಲ್ಲಿದ್ದರು. ಪರಿಣಾಮ ಅಲ್ಲಿಯೇ ಕುಸಿದು ಬಿದ್ದರು. ಅವರನ್ನು ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಲಾಯಿತು. ಫೆ 11ರಂದು ಶ್ರೀಧರ ಮೊಗೇರ್ ಅವರು ಸಾವನಪ್ಪಿದ ಬಗ್ಗೆ ವೈದ್ಯರು ಘೋಷಿಸಿದರು. ಸಹೋದರನ ಸಾವಿನ ಬಗ್ಗೆ ಸಿದ್ದಾಪುರ ಹಳದಕಟ್ಟಾ ವಾಜಪೇಯಿ ನಗರದ ಲತಾ ಮಂಜು ಮೊಗೇರ್ ಅವರು ಮಾಹಿತಿ ನೀಡಿದ್ದು, ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿದರು.
`ಕುಡಿತ ಒಳ್ಳೆಯದಲ್ಲ’