ಯಲ್ಲಾಪುರ ಗ್ರಾಮ ದೇವಿ ಜಾತ್ರೆಗೆ ಬರುವ ಭಕ್ತರಿಗೆ ಸಮಾನ ಮನಸ್ಕರ ಸಂಘಟನೆಯೊoದು ಅನುದಿನವೂ ಅನ್ನ ಪ್ರಸಾದ ವಿತರಿಸುತ್ತಿದೆ. ಕಾಳಮ್ಮ-ದುರ್ಗಮ್ಮ ದೇವಿಯರಿಗೆ ನೈವೆದ್ಯ ಮಾಡಿದ ಪಾಯಸವನ್ನು ಇಲ್ಲಿ ಭಕ್ತರಿಗೆ ಉಣಬಡಿಸಲಾಗುತ್ತಿದೆ.
ಯಲ್ಲಾಪುರದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಬಳಿ ನಿತ್ಯ ಸರಿ ಸುಮಾರು 5 ಸಾವಿರಕ್ಕೂ ಅಧಿಕ ಭಕ್ತರಿಗೆ ಅನ್ನದಾನ ಮಾಡಲಾಗುತ್ತಿದೆ. ಬರುವ ಭಕ್ತರಿಗೆ ಹೊಟ್ಟೆ ತುಂಬ ಅನ್ನ, ಸಾಂಬಾರ್, ಚಟ್ನಿ, ಪಲ್ಯ, ಪಾಯಸದ ಔತಣ ನೀಡಲಾಗುತ್ತಿದೆ. ಅತ್ಯಂತ ಶಿಸ್ತು, ಸಂಯಮದಿoದ ಈ ಕಾರ್ಯಕ್ಕಾಗಿ ಕಾರ್ಯಕರ್ತರು ದುಡಿಯುತ್ತಿದ್ದಾರೆ.
ಜಾತ್ರೆ ಅವಧಿಯಲ್ಲಿ ನಾಟಕ ಪ್ರದರ್ಶನ ನಡೆಸುತ್ತಿದ್ದ ವಿ ವಿ ಜೋಶಿ ಅವರು ಈ ಅನ್ನದಾನ ಸಂಘಟನೆಯ ರೂವಾರಿ. ನಾಟಕ ಪ್ರದರ್ಶನದಿಂದ ನಷ್ಟ ಅನುಭವಿಸುತ್ತಿದ್ದ ವಿ ವಿ ಜೋಶಿ ಅವರು ಈ ಬಗ್ಗೆ ದೇವಿಯರಲ್ಲಿ ಪ್ರಸಾದ ಕೇಳಿದ್ದು, ಆ ಅವಧಿಯಲ್ಲಿ ಅವರಿಗೆ ಅನ್ನದಾನ ಮಾಡುವ ಸೂಚನೆ ಸಿಕ್ಕಿತು. ಈ ಹಿನ್ನಲೆ ಅನ್ನದಾನದ ಸಂಕಲ್ಪ ಮಾಡಿದ ಅವರು ಮೊದಲು ವೆಂಕಟ್ರಮಣ ಮಠದಲ್ಲಿ ಮೂರು ದಿನದ ಅನ್ನದಾನ ಸೇವೆ ಮಾಡಿದರು. ಅದಾದ ನಂತರ ಕಳೆದ ನಾಲ್ಕು ವರ್ಷಗಳಿಂದ ಜಾತ್ರೆಯ ಎಲ್ಲಾ ದಿನವೂ ಅನ್ನದಾನ ಮಾಡುವ ಕಾಯಕ ಮಾಡಿಕೊಂಡು ಬಂದಿದ್ದಾರೆ. ದೇವಾಲಯದ ಅರ್ಚಕ ಪರಶುರಾಮ ಆಚಾರಿ, ಸಂತೋಷ ಗುಡಿಗಾರ, ಗಣೇಶ ಪಂಡ್ರಾಪುರ, ಪ್ರಕಾಶ ರೇವಣಕರ್ ಅವರು ವಿ ವಿ ಜೋಶಿ ಅವರ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಅನೇಕ ದಾನಿಗಳು ಈ ಸೇವೆಗೆ ಕೈ ಜೋಡಿಸಿದ್ದು, ಅಕ್ಕಿ-ಕಾಯಿ, ಬೆಲ್ಲ, ಬೆಳೆಗಳನ್ನು ದೇಣಿಗೆ ರೂಪದಲ್ಲಿ ಕೊಡುತ್ತಿದ್ದಾರೆ.
`ಶಿಸ್ತಿನ ಸಾಲಿನಲ್ಲಿ ನಿಂತು ಪ್ರಸಾದ ಬೋಜನ ಸ್ವೀಕರಿಸಬೇಕು. ಆಹಾರವನ್ನು ಹಾಳು ಮಾಡಬಾರದು. ನೀರನ್ನು ನಿಯಮಿತವಾಗಿ ಬಳಸಬೇಕು’ ಎಂಬುದು ಇಲ್ಲಿನ ನಿಯಮ. ವೃದ್ಧರು, ವಿದ್ಯಾರ್ಥಿಗಳು, ನೌಕರರು ಹಾಗೂ ಅಂಗವಿಕಲರು ಇಲ್ಲಿ ಸಾಲಿನಲ್ಲಿ ನಿಲ್ಲಬೇಕಾದ ಅಗತ್ಯವಿಲ್ಲ. ಪ್ರವೇಶ ದ್ವಾರದ ಬಳಿ ಅವರಿಗೆ ಪ್ರತ್ಯೇಕ ಕೌಂಟರ್ ತೆರೆಯಲಾಗಿದ್ದು, ಅಲ್ಲಿಂದ ಪ್ರವೇಶಿಸಿ ಅವರು ಪ್ರಸಾದ ಸ್ವೀಕರಿಸುವ ಅವಕಾಶ ಕಲ್ಪಿಸಲಾಗಿದೆ. ಜಾತ್ರೆ ನಡುವಿನ ದಿನ ಶಿವರಾತ್ರಿ ಬಂದಿದ್ದು, ಶಿವರಾತ್ರಿಯ ದಿನ ಅನ್ನ ಪ್ರಸಾದದ ಬದಲು ಅಲ್ಪ ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಈ ದಿನವೂ ಒಗ್ಗರಣೆ ಅವಲಕ್ಕಿ ಜೊತೆ ಗೋದಿ ಕಡಿ ಪಾಯಸವನ್ನು ಭಕ್ತರಿಗೆ ಕೊಡಲಾಗುತ್ತದೆ.
ಅನ್ನ ಪ್ರಸಾದದ ಅವಧಿಯಲ್ಲಿ ಪ್ರತಿ ಹಂತದಲ್ಲಿಯೂ ಸ್ವಯಂ ಸೇವಕರು ಭಕ್ತರ ನೆರವಿಗೆ ಬರುತ್ತಿದ್ದಾರೆ. ನಿತ್ಯ 35ಕ್ಕೂ ಅಧಿಕ ಸ್ವಯಂ ಸೇವಕರು ಭಕ್ತರ ಸೇವೆಗೆ ನಿಂತಿದ್ದಾರೆ. ವಿವಿಧ ಮಹಿಳಾ ಮಂಡಳ, ಸ್ತಿಶಕ್ತಿ ಸಂಘಟನೆಯವರು ಈ ಸೇವಾ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಗ್ರಾಮೀಣ ಭಾಗದ ಮಹಿಳೆಯರು ಸಹ ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿ ತಮ್ಮಿಂದ ಆದ ಸೇವೆ ಮಾಡುತ್ತಿದ್ದಾರೆ. ಕನ್ನಡಗಲ್ ಹಾಗೂ ಲಿಂಗನಕೊಪ್ಪದ ಭಾಗದ ಜನ ಅಚ್ಚುಕಟ್ಟಾಗಿ ಅಡುಗೆ ಸಿದ್ಧಪಡಿಸುತ್ತಿದ್ದಾರೆ. ಮಧ್ಯಾಹ್ನ 12.30ಕ್ಕೆ ದೇವಿಯರಿಗೆ ನೈವೆದ್ಯ ಮಾಡಿ ನಂತರ ಪ್ರಸಾದ ವಿತರಣೆಯ ಕಾರ್ಯ ನಡೆಯುತ್ತಿದೆ. ಎಲ್ಲಾ ಭಕ್ತರ ಊಟ ಮುಗಿದ ನಂತರವೇ ಇಲ್ಲಿ ಸಂಘಟಕರು ಊಟ ಮಾಡುತ್ತಿದ್ದಾರೆ.