ಗಾoಜಾ ಗುಂಗಿನಲ್ಲಿ ಜಾತ್ರೆ ಪೇಟೆ ಅಲೆದಾಡುತ್ತಿದ್ದ ಉಮ್ಮಚ್ಗಿ ಹಾಗೂ ಚವತ್ತಿಯಯ ಪಡ್ಡೆ ಹೈಕಳಿಗೆ ಯಲ್ಲಾಪುರ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
Advertisement. Scroll to continue reading.
ಯಲ್ಲಾಪುರದಲ್ಲಿ ಅದ್ಧೂರಿ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ದೇಶದ ನಾನಾ ಭಾಗಗಳಿಂದ ಜನ ಬರುತ್ತಿದ್ದಾರೆ. ಅದರಲ್ಲಿಯೂ ರಜಾ ದಿನವಾದ ಶನಿವಾರ ಲಕ್ಷಾಂತರ ಭಕ್ತರು ಜಾತ್ರೆ ಪೇಟೆಗೆ ಬಂದಿದ್ದಾರೆ. ಉಮ್ಮಚ್ಗಿಯ ಜನತಾ ಕಾಲೋನಿಯ ಚಂದನ ಹನುಮಂತ ಹರಿಕಂತ್ರ (22) ಹಾಗೂ ಚವತ್ತಿಯ ಪ್ರಮೋದ ಅಶೋಕ ಶೇರುಗಾರ (29) ಸಹ ಫೆಬ್ರವರಿ 14ರ ರಾತ್ರಿ ಯಲ್ಲಾಪುರಕ್ಕೆ ಬಂದಿದ್ದು, ಅವರಿಬ್ಬರು ಮೋಜು ಮಸ್ತಿಯಲ್ಲಿ ತೊಡಗಿದ್ದರು.
ಅಲ್ಲಿ ಇಲ್ಲಿ ತಿರುಗಾಟದ ನಂತರ ಅವರಿಬ್ಬರು ವೈಟಿಎಸ್‌ಎಸ್ ಶಾಲೆ ಎದುರಿನ ರಸ್ತೆ ಬಳಿ ಬಂದಿದ್ದರು. ಅಲ್ಲಿ ಬರುವ ಮುನ್ನ ಇಬ್ಬರು ಗಾಂಜಾ ನಶೆ ಏರಿಸಿಕೊಂಡಿದ್ದರು. ಕದ್ದು ಮುಚ್ಚಿ ಗಾಂಜಾ ಹೊಡೆದ ಅವರಿಬ್ಬರು ಜಾತ್ರೆಯ ಎಲ್ಲಾ ಕಡೆ ಸುತ್ತಾಟ ನಡೆಸಿದ್ದು, ನಶೆಯಲ್ಲಿದ್ದ ಅವರಿಬ್ಬರು ಸಾರ್ವಜನಿಕರ ಜೊತೆ ಅನುಚಿತವಾಗಿ ವರ್ತಿಸಲು ಶುರು ಮಾಡಿದರು.
ಅಮಲಿನಲ್ಲಿ ಗೊಣಗುತ್ತಿದ್ದ ಅವರಿಬ್ಬರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದರು. ಕುಲುಮೆ ಕೆಲಸ ಮಾಡಿಕೊಂಡಿದ್ದ ಚಂದನ ಹರಿಕಂತ್ರ ಅವರ ಜೊತೆ ಚಾಲಕನಾಗಿರುವ ಪ್ರಮೋದ ಶೇರುಗಾರ್ ಅವರನ್ನು ಪೊಲೀಸರು ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು. ವೈದ್ಯರು ಅವರಿಬ್ಬರು ಗಾಂಜಾ ಸೇವನೆ ಮಾಡಿರುವುದನ್ನು ದೃಢಪಡಿಸಿದರು.
ಈ ಹಿನ್ನಲೆ ಪಿಸೈ ರಾಜಶೇಖರ ವಂದಲಿ ಅವರು ಆ ಯುವಕರಿಬ್ಬರಿಗೂ ಬುದ್ದಿ ಹೇಳಿದರು. ಗಾಂಜಾ ಸೇವನೆಯಿಂದ ದೇಹ ಹಾಗೂ ಮನಸ್ಸಿನ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿದರು. ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುವಂತೆ ಸೂಚಿಸಿ ಅವರಿಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿದರು.
`ಮಾದಕ ವ್ಯಸನ ಬದುಕಿಗೆ ಮಾರಕ’