ಮಕ್ಕಳನ್ನು ಶಾಲೆಗೆ ಬಿಡುವುದಕ್ಕಾಗಿ ಮನೆಯಿಂದ ಹೊರಟ ಹೊನ್ನಾವರದ ದಾಕ್ಷಾಯಣಿ ನಾಯ್ಕ ಅವರು ಮನೆಗೆ ಬಂದಿಲ್ಲ.
ಹೊನ್ನಾವರದ ಕೆಕ್ಕಾರ್ ಬಸ್ತಿಮಕ್ಕಿಯಲ್ಲಿ ಕುಮಾರ ಗೋಪಾಲ ನಾಯ್ಕ ಹಾಗೂ ದಾಕ್ಷಾಯಣಿ ನಾಯ್ಕ ದಂಪತಿ ವಾಸವಾಗಿದ್ದಾರೆ. ಕುಮಾರ ನಾಯ್ಕ ಅವರು ತಮ್ಮದೇ ಆದ ವ್ಯಾಪಾರ-ವ್ಯವಹಾರ ನೋಡಿಕೊಳ್ಳುತ್ತಿದ್ದು, ದಾಕ್ಷಾಯಣಿ ನಾಯ್ಕ ಅವರು ಮನೆ ಕೆಲಸ ಮಾಡಿಕೊಂಡಿದ್ದರು. ಫೆಬ್ರವರಿ 17ರಂದು ದಾಕ್ಷಾಯಣಿ ನಾಯ್ಕ ಅವರು ತಮ್ಮ ಮಕ್ಕಳನ್ನು ಶಾಲೆಗೆ ಬಿಟ್ಟು ಬರಲು ಹೊರಟಿದ್ದರು.
ಆ ದಿನ ಬೆಳಗ್ಗೆ 7.45ಕ್ಕೆ ಮಕ್ಕಳನ್ನು ಶಾಲಾ ವಾಹನಕ್ಕೆ ಬಿಡಲು ಹೋದವರು ನಂತರ ಅವರು ಎಲ್ಲಿ ಹೋದರು? ಎಂದೇ ಗೊತ್ತಾಗಲಿಲ್ಲ. ಹೊನ್ನಾವರದ ಮಾರ್ಥೋಮಾ ಶಾಲೆಯ ವಾಹನದಲ್ಲಿ ಮಕ್ಕಳನ್ನು ಹತ್ತಿಸಿದ ನಂತರ ದಾಕ್ಷಾಯಣಿ ನಾಯ್ಕ ಅವರು ಕಾಣೆಯಾಗಿದ್ದಾರೆ. ಇದರಿಂದ ಆತಂಕಕ್ಕೆ ಒಳಗಾದ ಕುಮಾರ ನಾಯ್ಕ ಅವರು ಎಲ್ಲಾ ಕಡೆ ಪತ್ನಿಗಾಗಿ ಶೋಧ ನಡೆಸಿದರು. ಎಲ್ಲಿಯೂ ಸಿಗದ ಕಾರಣ ಪೊಲೀಸರ ಮೊರೆ ಹೋದರು. ಪೊಲೀಸರು ಸಹ ದಾಕ್ಷಾಯಣಿ ನಾಯ್ಕ ಅವರ ಹುಡುಕಾಟ ಶುರು ಮಾಡಿದ್ದಾರೆ.