ಹೆರಿಗೆಗೆ ಬರುವ ಬಡ ಗರ್ಭಿಣಿಯರಿಂದ 15-20 ಸಾವಿರ ರೂ ವಸೂಲಿ ಮಾಡುತ್ತಿದ್ದ ದಾಂಡೇಲಿಯ ಸರ್ಕಾರಿ ವೈದ್ಯರಿಬ್ಬರಿಗೆ ಹಳಿಯಾಳ ಕ್ಷೇತ್ರದ ಶಾಸಕ ಆರ್ ವಿ ದೇಶಪಾಂಡೆ ಅವರು ತರಾಠೆಗೆ ತೆಗೆದುಕೊಂಡಿದ್ದು, ಅದರ ಬೆನ್ನಲ್ಲೇ ಆ ಇಬ್ಬರು ವೈದ್ಯರಿಗೆ ಮತ್ತೊಂದು ಸಂಕಷ್ಟ ಶುರುವಾಗಿದೆ.
ಈಚೆಗೆ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ದಾಂಡೇಲಿಯ ನಗರದ ತಾಯಿ ಮತ್ತು ಮಕ್ಕಳ ಆರೈಕೆ ಆರೋಗ್ಯ ಆಸ್ಪತ್ರೆಯ ಭ್ರಷ್ಟಾಚಾರದ ಬಗ್ಗೆ ಚರ್ಚೆ ನಡೆದಿತ್ತು. ಆ ವೇಳೆ ಡಾ ಅಖಿಲ ಕಿತ್ತೂರ ಹಾಗೂ ಡಾ ಕೀರ್ತಿ ಅವರು ತಾವು ನಡೆಸಿದ ಹಣಕಾಸು ವ್ಯವಹಾರದ ಬಗ್ಗೆ ಅವರೇ ಒಪ್ಪಿಕೊಂಡಿದ್ದರು. `ನಾವು ಯಾರಿಗೂ ದುಡ್ಡು ಕೇಳಿಲ್ಲ. ಖುಷಿಗೆ ಕೊಟ್ಟಿದನ್ನು ಮಾತ್ರ ಸ್ವೀಕರಿಸಿದ್ದೇವೆ’ ಎಂದವರು ಹೇಳಿಕೆ ನೀಡಿದ್ದರು. ಇದರಿಂದ ಆರ್ ವಿ ದೇಶಪಾಂಡೆ ಇನ್ನಷ್ಟು ಗರಂ ಆಗಿದ್ದು, ಅವರಿಬ್ಬರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದರು. ಸದ್ಯ ಆರೋಗ್ಯ ಇಲಾಖೆಯ ಬೆಳಗಾವಿ ವಿಭಾಗದ ವಿಭಾಗೀಯ ಜಂಟಿ ನಿರ್ದೇಶಕಿ ಡಾಪುಷ್ಪಾ ಅವರು ಸೋಮವಾರ ದಾಂಡೇಲಿಗೆ ಭೇಟಿ ನೀಡಿದ್ದಾರೆ. ಆಸ್ಪತ್ರೆಯ ವೈದ್ಯರಿಬ್ಬರ ಜೊತೆ ಎಲ್ಲಾ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಡಿವೈಎಫ್‌ಐ ರಾಜ್ಯ ಸಮಿತಿ ಸದಸ್ಯ ಡಿ ಸ್ಯಾಮಸನ್ ಅವರು ಡಾ ಪುಷ್ಪಾ ಅವರನ್ನು ಭೇಟಿಯಾಗಿ ತಾಯಿ ಮತ್ತು ಮಕ್ಕಳ ಆರೈಕೆ ಆರೋಗ್ಯ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಘಟನಾವಳಿಗಳ ಕುರಿತು ಕುಲಂಕುಶ ತನಿಖೆಗೆ ಆಗ್ರಹಿಸಿದರು. ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಜೊತೆ ತನಿಖಾಧಿಕಾರಿಗಳು ಸಭೆ ನಡೆಸಿ ಕಿವಿಮಾತು ಹೇಳಿದರು. `ಭ್ರಷ್ಟಾಚಾರರಹಿತ ಸೇವೆ ನೀಡಬೇಕು’ ಎಂದು ತಾಕೀತು ಮಾಡಿದರು. `ಹಣ ಬೇಡುವುದಲ್ಲ, ಖುಷಿಗೆ ಕೊಟ್ಟರೂ ಅದನ್ನು ಪಡೆಯಬಾರದು’ ಎಂದು ತಾಕೀತು ಮಾಡಿದರು. `ರೋಗಿಗಳನ್ನು ಧಾರವಾಡಕ್ಕೆ ರೆಫರ್ ಮಾಡುವುದರ ಬದಲು ಸಾಧ್ಯವಾದಷ್ಟು ಇಲ್ಲಿಯೇ ಸೇವೆ ನೀಡಬೇಕು’ ಎಂಬ ನಿರ್ದೇಶನ ನೀಡಿದರು.
`ಸ್ಥಳೀಯರಿಂದಲೂ ವಿವಿಧ ಮಾಹಿತಿ ಸಂಗ್ರಹಿಸಲಾಗಿದೆ. ಈ ಬಗ್ಗೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುತ್ತದೆ’ ಎಂದು ಡಾ ಪುಷ್ಪಾ ಅವರು ಮಾಧ್ಯಮಕ್ಕೆ ಮಾಹಿತಿ ನೀಡಿದರು. `ಹೆರಿಗೆ ಮಾಡಿಸಿಕೊಳ್ಳಲು ಹಣ ಕೊಟ್ಟಿರುವುದರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ವರದಿಯನ್ನ ಕೊಡುವಂತೆ ತಾಲೂಕು ಆರೋಗ್ಯ ವೈದ್ಯಾಧಿಕಾರಿಯವರಿಗೆ ನಿರ್ದೇಶನವನ್ನು ನೀಡಿದ್ದೇನೆ’ ಎಂದು ತಿಳಿಸಿದರು. ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿ ಡಾ. ಶಂಕರ ಮತ್ತು ತಾಲೂಕು ಆರೋಗ್ಯ ವೈದ್ಯಾಧಿಕಾರಿ ಅನಿಲಕುಮಾರ ನಾಯ್ಕ ಜೊತೆಗಿದ್ದರು.