ಕಾರವಾರದ ಕದಂಬ ನೌಕಾನೆಲೆ ವ್ಯಾಪ್ತಿಯಲ್ಲಿ ಸ್ಥಳೀಯರು ಹಾಗೂ ನಿವೃತ್ತ ನೌಕಾಪಡೆ ಸಿಬ್ಬಂದಿ ಸಣ್ಣ-ಪುಟ್ಟ ಅಂಗಡಿ ನಡೆಸುತ್ತಿದ್ದು, ಅದನ್ನು ತೆರವು ಮಾಡಲು ಸ್ಥಳೀಯ ಆಡಳಿತ ನಿರ್ಧರಿಸಿದೆ. ಈ ನಿರ್ಣಯಕ್ಕೆ ಸಾಕಷ್ಟು ವಿರೋಧವ್ಯಕ್ತವಾಗಿದೆ.
ಈ ವಿಷಯವಾಗಿ ಕಾರವಾರ ನೌಕಾನೆಲೆ ನಿರಾಶ್ರಿತರ ಗುತ್ತಿಗೆ ಕಾರ್ಮಿಕರ ಸಹಕಾರಿ ಸಂಘದವರು ಮಂಗಳವಾರ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿದ್ದಾರೆ. `ತೆರವು ಕಾರ್ಯಾಚರಣೆಯನ್ನು ತಕ್ಷಣ ಸ್ಥಗಿತಗೊಳಿಸಬೇಕು’ ಎಂದವರು ಆಗ್ರಹಿಸಿದ್ದಾರೆ. “ನೌಕಾನೆಲೆಗಾಗಿ ಭೂಮಿ ಕಳೆದುಕೊಂಡ ಕುಟುಂಬಗಳು ಹಾಗೂ ದೇಶ ಸೇವೆ ಸಲ್ಲಿಸಿ ನಿವೃತ್ತರಾದ ಸಿಬ್ಬಂದಿ ಜೀವನೋಪಾಯಕ್ಕಾಗಿ ಇಲ್ಲಿ ಸಣ್ಣ ವ್ಯಾಪಾರ ಅವಲಂಬಿಸಿದ್ದಾರೆ. ಈಗ ಏಕಾಏಕಿ ಅಂಗಡಿ ಮುಚ್ಚುವಂತೆ ಸೂಚಿಸಿರುವುದು ನೂರಾರು ಕುಟುಂಬಗಳನ್ನು ಬೀದಿಗೆ ತಳ್ಳಿದ ಹಾಗಾಗುತ್ತದೆ’ ಎಂದು ಸಂಘದವರು ವಿವರಿಸಿದ್ದಾರೆ.
`ಕೊರೊನಾ ಸಂಕಷ್ಟದ ಸಮಯದಲ್ಲಿ ನೌಕಾನೆಲೆಯ ಅಧಿಕಾರಿಗಳ ಅನುಮತಿಪಡೆದು ಅಂಗಡಿ ನಿರ್ಮಿಸಲಾಗಿದೆ. ಸದ್ಯ ಯಾವುದೇ ಕಾರಣ ನೀಡದೇ ಸ್ಥಳೀಯರ ಅಂಗಡಿ ತೆರವು ಮಾಡುವುದು ಸರಿಯಲ್ಲ. ಹೊರ ರಾಜ್ಯದವರ ಅಂಗಡಿಗಳಿಗೆ ಯಾವುದೇ ತೊಂದರೆ ನೀಡದೇ ಸ್ಥಳೀಯರನ್ನು ಮಾತ್ರ ಗುರಿಯಾಗಿರಿಸಿಕೊಂಡು ಅನ್ಯಾಯ ಮಾಡಲಾಗುತ್ತಿದೆ’ ಎಂದವರು ದೂರಿದ್ದಾರೆ. `ಹೊರ ರಾಜ್ಯದವರ ಅಂಗಡಿಗಳನ್ನು ಬಿಟ್ಟು ಕೇವಲ ಸ್ಥಳೀಯರ ಅಂಗಡಿಗಳ ಮೇಲೆ ಕ್ರಮ ಕೈಗೊಳ್ಳುತ್ತಿರುವುದನ್ನು ತಡೆಯಬೇಕು. ಜಿಲ್ಲಾಡಳಿತವು ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಪರಿಶೀಲಿಸಬೇಕು’ ಎಂದು ಆಗ್ರಹಿಸಿದ್ದಾರೆ.
`ನೌಕಾನೆಲೆಗೆ ಭೂಮಿ ನೀಡಿರುವ ತ್ಯಾಗದ ಹಿನ್ನೆಲೆ ಹಾಗೂ ನಿವೃತ್ತ ಸೈನಿಕರ ಹಿತದೃಷ್ಟಿಯಿಂದ ಜಿಲ್ಲಾಡಳಿತವು ಮಧ್ಯಪ್ರವೇಶಿಸಿ ನಮಗೆ ನ್ಯಾಯ ಒದಗಿಸಬೇಕು’ ಎಂದು ಒತ್ತಾಯಿಸಿದ್ದಾರೆ. ಸಂಘದ ಅಧ್ಯಕ್ಷ ಉಮಾಕಾಂತ ಹರಿಕಂತ್ರ, ಪ್ರಮುಖರಾದ ಗಣಪತಿ ತಾಂಡೇಲ್, ಚೇತನ್ ನಾಯ್ಕ, ಪ್ರವೀಣ ತಾಂಡೇಲ್, ಕೃಷ್ಣ ಮುದುಗೇಕರ್, ಕಾರ್ತಿಕ ತಾಂಡೇಲ್, ರಾಜೇಶ ಬಾಂದೇಕರ್ ಮುಂತಾದವರು ಜಿಲ್ಲಾಧಿಕಾರಿ ಕೆ ಲಕ್ಷಿಪ್ರಿಯಾ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.