ಅoಬೇಡ್ಕರ್ ಜಯಂತಿ ಅಂಗವಾಗಿ ಸಿದ್ದಾಪುರದಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳೇ ಗೈರಾಗಿದ್ದಾರೆ. ಹೀಗಾಗಿ ದಲಿತ ಸಂಘಟನೆ ಪ್ರಮುಖರು ಸಭೆ ಬಹಿಷ್ಕರಿಸಿ ಆಕ್ರೋಶವ್ಯಕ್ತಪಡಿಸಿದ್ದಾರೆ.
ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಬಿ ಆರ್ ಅಂಬೇಡ್ಕರ್ ಜಯಂತಿ ಆಚರಣೆಯ ಪೂರ್ವಭಾವಿ ಸಭೆ ಕರೆಯಲಾಗಿತ್ತು. ತಹಶೀಲ್ದಾರ್ ಅಧ್ಯಕ್ಷತೆಯ ಈ ಸಭೆಗೆ ಅನೇಕ ಅಧಿಕಾರಿಗಳು ಗೈರಾಗಿದ್ದರು. ಇದನ್ನು ಖಂಡಿಸಿ ದಲಿತ ಮುಖಂಡರು ಒಕ್ಕೊರಲಿನಿಂದ ಸಭೆ ಬಹಿಷ್ಕರಿಸಿದರು.
ಅಂಬೇಡ್ಕರ್ ಶಕ್ತಿ ಸಂಘದ ಅಧ್ಯಕ್ಷ ನಂದನ್ ಬೋರ್ಕರ್ ಅವರು ಮಾತನಾಡಿ `ಈ ಹಿಂದೆ ನಡೆದ ದಲಿತರ ಕುಂದುಕೊರತೆ ಸಭೆಗಳಲ್ಲೂ ಇದೇ ರೀತಿ ಅಧಿಕಾರಿಗಳು ಗೈರುಹಾಜರಾಗಿದ್ದರು. ಕೇವಲ ಕೆಳಹಂತದ ಸಿಬ್ಬಂದಿ ಮಾತ್ರ ಸಭೆಗೆ ಬರುತ್ತಿದ್ದು, ಅಧಿಕಾರಿಗಳು ಬೇಜವಬ್ದಾರಿಯಿಂದ ವರ್ತಸುತ್ತಿದ್ದಾರೆ’ ಎಂದು ದೂರಿದರು. `ಸಭೆಗೆ ಅಧಿಕಾರಿಗಳು ಹಾಜರಾಗುವವರೆಗೆ ನಾವು ಯಾವುದೇ ಪೂರ್ವಭಾವಿ ಸಭೆಗಳಲ್ಲಿ ಭಾಗವಹಿಸುವುದಿಲ್ಲ’ ಎಂಬ ಹೇಳಿಕೆ ನೀಡಿದರು.
ಡಿಎಸ್‌ಎಸ್ ಮುಖಂಡ ಎಚ್ ಕೆ ಶಿವಾನಂದ ಅವರು ಮಾತನಾಡಿ `ಪ್ರತಿ ವರ್ಷವೂ ಇಂತಹ ಘಟನೆಗಳು ಮರುಕಳಿಸುತ್ತಿದ್ದು, ಜಯಂತಿಯನ್ನು ಕೇವಲ ಹೆಸರಿಗಷ್ಟೇ ಮಾಡುವ ಸಂಪ್ರದಾಯ ನಿಲ್ಲಬೇಕು. ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನಿಸಬೇಕು’ ಎಂದು ಒತ್ತಾಯಿಸಿದರು. ಎಚ್ ಎನ್ ಕಿರಣ ಕುಮಾರ ಅವರು ಮಾತನಾಡಿ `ದಲಿತರ ಬಗ್ಗೆ ಅಧಿಕಾರಿಗಳಿಗೆ ಕಾಳಜಿಯಿಲ್ಲ. ಅದಕ್ಕಾಗಿ ಅಂಬೇಡ್ಕರ್ ಅವರ ಜಯಂತಿ ಸಭೆಗೂ ಬಂದಿಲ್ಲ’ ಎಂದು ಆಕ್ಷೇಪಿಸಿದರು.