ದಿ ದೈವಜ್ಞ ಕೋ ಆಪ್ ಕ್ರೆಡಿಟ್ ಸೊಸೈಟಿಯ ಸಿಬ್ಬಂದಿಯೊಬ್ಬರು ತಮ್ಮದೇ ಸೊಸೈಟಿಯ ಸೇಫ್ ಲಾಕರಿನಲ್ಲಿರಿಸಿದ್ದ ಚಿನ್ನ ಕದ್ದಿದ್ದಾರೆ. ಜೊತೆಗೆ ಸೊಸೈಟಿಯ ಹಣವನ್ನು ಅವರು ಲಪಟಾಯಿಸಿದ್ದಾರೆ.
ಅಂಕೋಲಾದ ದಿ ದೈವಜ್ಞ ಕೋ ಆಪ್ ಕ್ರೆಡಿಟ್ ಸೊಸೈಟಿಯಲ್ಲಿ ಈ ಅಪರಾತಪರ ನಡೆದಿದೆ. ಸೊಸೈಟಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಅವಿನಾಶ ಅಶೋಕ ಶೇಟ್ ಅವರೇ ಅಕ್ರಮ ನಡೆಸಿದವರಾಗಿದ್ದು, ತುರ್ತು ಸನ್ನಿವೇಶದಲ್ಲಿ ಚಿನ್ನ ಅಡವಿಟ್ಟು ಸಾಲಪಡೆದ ಗ್ರಾಹಕರಿಗೆ ಅವರು ಅನ್ಯಾಯ ಮಾಡಿದ್ದಾರೆ. 2025ರ ಅಕ್ಟೊಬರ್ 19ರಿಂದ 2026ರ ಫೆಬ್ರವರಿ 2ರವರೆಗೆ ಅಧಿಕಾರದಲ್ಲಿದ್ದ ಅವಿನಾಶ ಶೇಟ್ ಅವರು ಸೊಸೈಟಿಯಲ್ಲಿ ಈವರೆಗೆ 10.30 ಲಕ್ಷ ರೂ ಅಕ್ರಮ ನಡೆಸಿದ್ದು ಗೊತ್ತಾಗಿದೆ.
ದಿ ದೈವಜ್ಞ ಕೋ ಆಪ್ ಕ್ರೆಡಿಟ್ ಸೊಸೈಟಿಯಲ್ಲಿ ಸಾಲ ಮಾಡಿದ್ದ ಸುಶೀಲಾ ರಾಮಾ ಪಡ್ತಿ, ರವಿಕುಮಾರ ಪಾಂಡುರAಗ ನಾಯ್ಕ, ರಕ್ಷಿತಾ ರವಿಕುಮಾರ ನಾಯ್ಕ ಹಾಗೂ ಗಿರೀಶ ಕೇಶವ ಗಾಂವ್ಕರ್ ಅವರ ಸಹಿ ಪೋರ್ಜರಿಯಾಗಿದೆ. ಈ ನಾಲ್ವರು ಸೊಸೈಟಿಯಲ್ಲಿರಿಸಿದ್ದ ಚಿನ್ನವೂ ಕಾಣೆಯಾಗಿದೆ. ಅವಿನಾಶ ಶೇಟ್ ಅವರು ಈ ನಾಲ್ವರ ಸಹಿ ಪೊರ್ಜರಿ ಮಾಡಿ 208.800 ಗ್ರಾಂ ಚಿನ್ನವನ್ನು ಎಗರಿಸಿದ್ದಾರೆ. ಜೊತೆಗೆ ಅದೇ ಸೊಸೈಟಿಯ ಗ್ರಾಹಕರಾದ ಕಾಶಿನಾಥ ನಾರಾಯಣ ರಾಯ್ಕರ್ ಹಾಗೂ ವೀಣಾ ಕಾಶಿನಾಥ ರಾಯ್ಕರ್ ಅವರ ಖಾತೆಯಲ್ಲಿದ್ದ ಹಣವನ್ನು ಕದ್ದಿದ್ದಾರೆ.
ಅಪರಾತಪರ ಮಾಡಿದ ಹಣವನ್ನು ಇನ್ನಿತರ ಖಾತೆಗಳಿಗೂ ವರ್ಗಾಯಿಸಿದ್ದು, ಕೈಯಲ್ಲಿ ಉಳಿದ ಇನ್ನಷ್ಟು ಹಣವನ್ನು ನಿಯಮಾನುಸಾರ ಶಿರಸಿ ಅರ್ಬನ್ ಬ್ಯಾಂಕ್ ಹಾಗೂ ಕೆಡಿಸಿಸಿ ಬ್ಯಾಂಕ್ ಖಾತೆಗೆ ಜಮಾ ಮಾಡದೇ ಸೊಸೈಟಿಗೂ ಮೋಸ ಮಾಡಿದ್ದಾರೆ. ಕಾರವಾರ ಮಾರುತಿಗಲ್ಲಿಯಲ್ಲಿ ವಾಸವಾಗಿರುವ ಶ್ಯಾಮ ಬಾಂದೇಕರ್ ಅವರು ಈಚೆಗೆ ಪ್ರಭಾರಿಯಾಗಿ ದಿ ದೈವಜ್ಞ ಕೋ ಆಪ್ ಕ್ರೆಡಿಟ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಅಧಿಕಾರವಹಿಸಿಕೊಂಡಿದ್ದು, ಅವರು ಈ ಎಲ್ಲಾ ಅಕ್ರಮಗಳನ್ನು ಪತ್ತೆ ಮಾಡಿದ್ದಾರೆ. ಸುಳ್ಳು ದಾಖಲೆ ಸೃಷ್ಠಿಸಿ ಗ್ರಾಹಕರ ಜೊತೆ ಸೊಸೈಟಿಗೂ ಮೋಸ ಮಾಡಿದ ಅವಿನಾಶ ಶೇಟ್ ವಿರುದ್ಧ ದೂರು ನೀಡಿದ್ದಾರೆ. ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದಾರೆ.