ಕಾರವಾರದ ಗೀತೇಶ ಕಲ್ಗುಟ್ಕರ್ ಅವರಿಗೆ ವೈಭವ ಥಾಮ್ಸೆ ಹಾಗೂ ಅವರ ಸಹಚರರು ಸೇರಿ ಹಿಗ್ಗಾಮುಗ್ಗ ಥಳಿಸಿದ್ದಾರೆ. ಆ ನೋವು ಸಹಿಸಲಾಗದೇ ಗೀತೇಶ ಕಲ್ಗುಟ್ಕರ್ ಅವರು ಆಸ್ಪತ್ರೆ ಸೇರಿದ್ದಾರೆ.
ಕಾರವಾರ ಕೋಡಿಭಾಗದ ಆಳ್ವೇವಾಡದಲ್ಲಿ ಗೀತೇಶ ಪ್ರೇಮಾನಂದ ಕಲ್ಗುಟ್ಕರ್ (28) ಅವರು ವಾಸವಾಗಿದ್ದಾರೆ. ಮೀನುಗಾರಿಕೆ ನಡೆಸಿ ಅವರು ಜೀವನ ನಡೆಸುತ್ತಿದ್ದಾರೆ. ಕೋಡಿಭಾಗ ಮಧ್ಯವೇವಾಡದ ವೈಭವ ಥಾಮ್ಸೆ, ಕಿಶನ್ ಕಲ್ಗುಟ್ಕರ್, ಸಾಯಿಕಟ್ಟಾದ ಆದೇಶ ಹಾಗೂ ತಾಮ್ಸೆವಾಡದ ಶಿವಾನಂದ ಸೇರಿ ಗೀತೇಶ ಕಲ್ಗುಟ್ಕರ್ ಅವರ ಮೇಲೆ ಆಕ್ರಮಣ ನಡೆಸಿದ್ದಾರೆ. ಮಾರ್ಚ 22ರ ರಾತ್ರಿ 10.30ಕ್ಕೆ ಈ ದಾಳಿ ನಡೆದಿದ್ದು, ರಕ್ತ ಬರುವ ಹಾಗೇ ಆ ನಾಲ್ವರು ಥಳಿಸಿದ್ದಾರೆ.
ಗೀತೇಶ ಕಲ್ಗುಟ್ಕರ್ ಅವರು ಕಾರವಾರ ಅಳ್ವೇವಾಡದ ಜಟ್ಟಿ ಹತ್ತಿರ ಸ್ನೇಹಿತರ ಜೊತೆ ಮಾತನಾಡುತ್ತಿರುವಾಗ ಅಲ್ಲಿ ವೈಭವ ಥಾಮ್ಸೆ ಅವರು ಆಗಮಿಸಿದ್ದು, ವೈಭವ ಥಾಮ್ಸೆ ಅವರು ಕೆಟ್ಟದಾಗಿ ಬೈಗುಳ ಶುರು ಮಾಡಿದ್ದಾರೆ. ಅದನ್ನು ವಿರೋಧಿಸಿದ ಕಾರಣ ಗೀತೇಶ ಕಲ್ಗುಟ್ಕರ್ ಅವರಿಗೆ ಪೆಟ್ಟು ಬಿದ್ದಿದೆ. ವೈಭವ ಥಾಮ್ಸೆ ಅವರೇ ಮೊದಲು ಗೀತೇಶ ಕಲ್ಗುಟ್ಕರ್ ಅವರ ಮೇಲೆ ಕೈ ಮಾಡಿದ್ದು, ಇದನ್ನು ನೋಡಿದ ಕಿಶನ್ ಕಲ್ಗುಟ್ಕರ್, ಆದೇಶ ಹಾಗೂ ಶಿವಾನಂದ ಅವರು
ಗೀತೇಶ ಕಲ್ಗುಟ್ಕರ್ ಅವರನ್ನು ನೆಲಕ್ಕೆ ದೂಡಿ ಕಾಲಿನಿಂದ ತುಳಿದಿದ್ದಾರೆ.
ಕಾಲಿನಿಂದ ಕೆನ್ನೆಯ ಮೇಲೆ ಒದ್ದ ಪರಿಣಾಮ ಗೀತೇಶ ಕಲ್ಗುಟ್ಕರ್ ಅವರಿಗೆ ರಕ್ತ ಬಂದಿದೆ. ಆಸ್ಪತ್ರೆ ಸೇರಿದ ಅವರು ತಮ್ಮ ಮೇಲೆ ಆಕ್ರಮಣ ನಡೆಸಿದವರ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ. ಕಾರವಾರ ಶಹರ ಪೊಲೀಸರು ಪ್ರಕರಣ ದಾಖಲಿಸಿ ವಿಚಾರಣೆ ಶುರು ಮಾಡಿದ್ದಾರೆ.