ಬಿಜೆಪಿಯ ಸಾಮಾನ್ಯ ಕಾರ್ಯಕರ್ತರಾಗಿದ್ದ ಯಲ್ಲಾಪುರದ ಶಾಂತರಾಮ ಸಿದ್ದಿ ಅವರು ತಮ್ಮ ಪಕ್ಷನಿಷ್ಠೆ ಪರಿಣಾಮವಾಗಿ ವಿಧಾನ ಪರಿಷತ್ ಸದಸ್ಯರಾಗಿದ್ದು, ಅದರ ಮುಂದುವರೆದ ಭಾಗವಾಗಿ ಬುಧವಾರ ಸಭಾಪತಿ ಹುದ್ದೆ ನಿಭಾಯಿಸಿದ್ದಾರೆ. ಈ ದಿನ ಅವರು ಅಚ್ಚುಕಟ್ಟಾಗಿ ಸದನ ನಡೆಸಿದ್ದು, ಸಾಮಾನ್ಯ ವ್ಯಕ್ತಿಯೊಬ್ಬರು ಉನ್ನತ ಹುದ್ದೆ ಅಲಂಕರಿಸಿರುವುದು ಸಿದ್ದಿ ಸಮುದಾಯದವರ ಹರ್ಷ ಹೆಚ್ಚಿಸಿದೆ.
ಸಾಮಾನ್ಯವಾಗಿ ಅತ್ಯಂತ ಹಿರಿಯ ಶಾಸಕರಿಗೆ ಸಭಾಪತಿ ಹುದ್ದೆ ಸಿಗುತ್ತದೆ. ಆದರೆ, ಇದೇ ಮೊದಲ ಬಾರಿ ವಿಧಾನ ಪರಿಷತ್ ಸದಸ್ಯರಾಗಿರುವ ಶಾಂತರಾಮ ಸಿದ್ದಿ ಅವರಿಗೆ ಈ ದಿನ ಸಭಾಪತಿ ಖುರ್ಚಿ ಸಿಕ್ಕಿದೆ. ಬಸವರಾಜ ಹೊರಟ್ಟಿ ಅವರ ಗೈರು ಹಿನ್ನಲೆ ಶಾಂತರಾಮ ಸಿದ್ದಿ ಅವರು ಸಭಾಪತಿ ಸ್ಥಾನ ಅಲಂಕರಿಸಿದ್ದು, ಕಲಾಪಗಳನ್ನು ನಡೆಸಿದರು.
ಸಭಾಪತಿ ಹುದ್ದೆ ನಿರ್ವಹಿಸಿ ಅನುಭವ ಇಲ್ಲದಿದ್ದರೂ ಶಾಂತರಾಮ ಸಿದ್ದಿ ಅವರು ಆ ಬಗ್ಗೆ ಅಂಜಿಕೆ ಹೊಂದಲಿಲ್ಲ. ಅನುಭವಿ ಸಭಾಪತಿಗಳ ಹಾಗೇ ಅವರು ಆ ಆಸನದಲ್ಲಿ ಆಸೀನರಾಗಿ ತಮ್ಮ ಕರ್ತವ್ಯ ನಿಭಾಯಿಸಿದರು. `ಕರ್ನಾಟಕ ಶಾಸನ ಸಭೆಯ ಅತ್ಯುನ್ನತ ಮತ್ತು ಪವಿತ್ರ ಸ್ಥಾನವಾದ ಸಭಾಪತಿ ಪೀಠವನ್ನು ಮೊಟ್ಟ ಮೊದಲ ಬಾರಿ ಅಲಂಕರಿಸಿರುವುದು ಹೆಮ್ಮೆಯ ಸಂಗತಿ’ ಎಂದು ಶಾಂತರಾಮ ಸಿದ್ದಿ ಅವರು ಹೇಳಿಕೊಂಡಿದ್ದಾರೆ. ಶಾಂತರಾಮ ಸಿದ್ದಿ ಅವರಿಗೆ ಈ ಅತ್ಯುನ್ನತ ಅವಕಾಶ ಸಿಕ್ಕಿದಕ್ಕಾಗಿ ಅನೇಕರು ಅಚ್ಚರಿಯ ಜೊತೆ ಸಂತಸವ್ಯಕ್ತಪಡಿಸಿದ್ದಾರೆ.