ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಕರ್ಕಶವಾಗಿ ಹಾರ್ನ್ ಮಾಡಿದ ವಿಚಾರವಾಗಿ ಭಟ್ಕಳದಲ್ಲಿ ಗಲಾಟೆ ನಡೆದಿದೆ. ಈ ಗಲಾಟೆಯಲ್ಲಿ ಚಾಕು-ಚೂರಿ ಸದ್ದು ಮಾಡಿದ್ದು, ಇಬ್ಬರಿಗೆ ಗಾಯವಾಗಿದೆ. ಈ ಗಲಾಟೆಯಲ್ಲಿ ಭಾಗವಹಿಸಿದ ಮೂವರನ್ನು ಪೊಲೀಸರು ಬಂಧಿಸಿ, ಕಾನೂನು ಕ್ರಮ ಜರುಗಿಸಿದ್ದಾರೆ.
ಈ ವಿಷಯವಾಗಿ ಜಾಲಿ ರಸ್ತೆಯ ಸಯ್ಯದ್ ಮಹ್ಮದ್ ಫಾಹೀಸ್ ಸೈಯ್ಯದ್ ಇಸ್ಮಾಯಿಲ್ ಅವರು ನೀಡಿದ ಮಾಹಿತಿ ಪ್ರಕಾರ, ಗುರುವಾರ ಸಂಜೆ 6.30ರ ಸುಮಾರಿಗೆ ಈ ಗಲಾಟೆ ನಡೆದಿದೆ. ಅವರು ಜಾಲಿ ಬೀಚ್ ಕಡೆಗೆ ಹೋಗುತ್ತಿದ್ದಾಗ ವಾಹನದ ಹಾರ್ನ್ ಶಬ್ದದ ಬಗ್ಗೆ ನವಾಯತ ಮುಸ್ಲಿಂ ಮತ್ತು ಬ್ಯಾರಿ ಮುಸ್ಲಿಂ ಯುವಕರ ನಡುವೆ ವಾಗ್ವಾದ ನಡೆದಿದೆ. ಸಯ್ಯದ್ ಅವರು ಜಾಲಿ ಬೀಚ್ ರಸ್ತೆಯಿಂದ ಮನೆಗೆ ಬರುತ್ತಿರುವಾಗ ಮುಸ್ಬಾ ಹೌಸ್ ಎದುರಿಗೆ ಹಿಂದಿನಿoದ ಒಂದು ಬಿಳಿ ಬಣ್ಣದ ಬೊಲೆರೋ ವಾಹನ ಹಾರ್ನ್ ಹೊಡೆದಿದ್ದು `ನೀವು ಅನಗತ್ಯವಾಗಿ ಹಾರ್ನ್ ಹೊಡೆಯಬೇಡಿ. ಈ ರಸ್ತೆ ದೊಡ್ಡದಾಗಿದೆ ನಿಮ್ಮ ವಾಹನ ಇಲ್ಲಿಂದ ಪಾಸ್ ಆಗುತ್ತದೆ’ ಎಂದು ಸಯ್ಯದ್ ಅವರು ಹೇಳಿದ್ದಾರೆ. ಇದೇ ವಿಷಯ ದೊಡ್ಡದಾಗಿದ್ದು, ರಾತ್ರಿ ಜಾಲಿಯ ದೇವಿ ನಗರ ಕ್ರಾಸ್ ಆಟೋರಿಕ್ಷಾ ಸ್ಟ್ಯಾಂಡ್ ಬಳಿ ಪರಿಸ್ಥಿತಿ ಬದಲಾಗಿದೆ. ಅದು ಹಿಂಸಾಚಾರಕ್ಕೆ ತಿರುಗಿದೆ.
ಸಂಜೆ 7 ಗಂಟೆ ಸಮಯಕ್ಕೆ ಭಟ್ಕಳದ ಜಾಲಿ ದೇವಿ ನಗರ ಕ್ರಾಸ್ ಹತ್ತಿರ ಬೊಲೆರೋ ವಾಹನ ಮತ್ತು ಕೆಂಪು ಬಣ್ಣದ ಮಾರುತಿ ಸ್ವಿಫ್ಟ್ ಕಾರ್ ಹಾಗೂ ಜಾವಾ ಬೈಕಿನಲಿ ಕೆಲವರು ಆಗಮಿಸಿ ಗಲಾಟೆ ಮಾಡಿದ್ದಾರೆ. ದೇವಿನಗರದ ಮೊಹಮ್ಮದ್ ತಾಹಿರ್ ಮೊಹಮ್ಮದ್ ಹುಸೇನ್ ಕುಟ್ಟಿ , ಕೈಫ್ ಕುಟ್ಟಿ, ಜಾಮಿಯಾಬಾದಿನ ಯಾಸೀನ್ ಪಾಷಾ, ಮೂಸಾನಗರದ ಮೊಹಮ್ಮದ್ ಮೌಲಾ ಅಲಿಯಾಸ್ ಮುಸ್ತಫ್ ಮುಕ್ಬುಲ್ ಸಾಬ್ ಕಲ್ಲೂರು, ದೇವಿನಗರದ ಮೊಹಮ್ಮದ್ ಖಾಸಿಂ ಅಬ್ದುಲ್ ಖಾದೀರ್ ಕುಟ್ಟಿ ಮತ್ತು ಇತರರು ಸ್ಥಳಕ್ಕೆ ಬಂದು ಸಯ್ಯದ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಹಲ್ಲೆಯಲ್ಲಿ ತೌಸೀಫ್ ಖತೀಬ್ ತಂದೆ ತಲ್ಹಾ ಖತೀಬ್ ಹೊಟ್ಟೆಗೆ ಇರಿತದ ಗಾಯವಾಗಿದ್ದು, ಮೊಹಮ್ಮದ್ ಜುಫಾಫ್ ಅರ್ಮರ್ ಅವರ ಕುತ್ತಿಗೆಯ ಬಲ ಭಾಗದ ಬಳಿ ಚಾಕು ಚುಚ್ಚಿದೆ.
ಮೊಹಮ್ಮದ್ ವಸೀಮ್ ದಾಮ್ದಾ ಅವರ ಕೈಗೆ ಗಾಯಗಳಾಗಿದ್ದು ಜಗಳ ಬಿಡಿಸಲು ಬಂದ ಆಸರಕೇರಿಯ ಮಹ್ಮದ್ ಅವುನ್ ತಂದೆ ಅಬ್ದುಲ್ ಖಾದೀರ್ ಭಾಷಾ ಇಕ್ಕೇರಿ ಅವರ ಬಲಗಣ್ಣಿನ ಭಾಗಕ್ಕೆ ನೋವಾಗಿದೆ. ಈ ಗಲಾಟೆಯಲ್ಲಿ ಗಾಯಾಳು ತೌಸೀಪ್ ಖತೀಬ್ ಇವರ ಸುಮಾರು 20 ಲಕ್ಷ ರೂ ಮೌಲ್ಯದ ಕೈಗಡಿಯಾರ ಮತ್ತು 40 ಸಾವಿರ ರೂ ಹಣವೂ ಕಾಣೆಯಾಗಿದೆ. ಗಾಯಗೊಂಡವರನ್ನು ಮೊದಲು ಭಟ್ಕ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ನಂತರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಘಟನಾ ಸ್ಥಳಕ್ಕೆ ಏಕಾಏಕಿ ನೂರಾರು ಜನರು ಆಸ್ಪತ್ರೆಗೆ ಧಾವಿಸಿದ್ದರಿಂದ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ದಾಳಿಗೆ ಸಂಬAಧಿಸಿದ ವೀಡಿಯೊಗಳು ಹರಿದಾಡಿದ್ದು, ಆರೋಪಿಗಳ ಬಂಧನಕ್ಕೆ ಜನ ಒತ್ತಾಯಿಸಿದರು. ಪೊಲೀಸರು ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದರು.
ನAತರ, ಭಟ್ಕಳ ಪಟ್ಟಣ ಪೊಲೀಸ್ ಠಾಣೆಯ ಹೊರಗೆ ಕೂಡ ಹೆಚ್ಚಿನ ಸಂಖ್ಯೆಯ ಜನರು ಜಮಾಯಿಸಿ, ದಾಳಿಕೋರರ ವಿರುದ್ಧ ತ್ವರಿತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ, ಡಿವೈಎಸ್ಪಿ ಗಿರೀಶ್ ಮತ್ತು ಪಿಐ ದಿವಾಕರ ಪಿ ಎಂ ಪ್ರತಿಭಟನಾಕಾರರನ್ನು ಶಾಂತಗೊಳಿಸಲು ಪ್ರಯತ್ನಿಸಿದರು. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಯಿತು. ಸದ್ಯ ಭಟ್ಕಳ ಪೊಲೀಸರು ಮೊಹಮ್ಮದ್ ತಾಹಿರ್, ಮೊಹಮ್ಮದ್ ಮೌಲಾ ಮತ್ತು ಮೊಹಮ್ಮದ್ ಖಾಸಿಂ ಎಂಬಾತರನ್ನು ಬಂಧಿಸಿದ್ದಾರೆ.