ರಸ್ತೆಯಲ್ಲಿ ಹೋಗಿ-ಬರುವ ಜನರಿಗೆ ಖಾರದಪುಡಿ ಎರಚಿ ಅವರ ಬಳಿಯಿಂದ ಬಂಗಾರ ಹಾಗೂ ಹಣ ದರೋಡೆಗೆ ಪ್ರಯತ್ನಿಸಿದ್ದ ಅಜಯ ಮಡ್ಲಿ ಅವರನ್ನು ಮುಂಡಗೋಡು ಪೊಲೀಸರು ಬಂಧಿಸಿದ್ದಾರೆ. ಜನರನ್ನು ಹೆದರಿಸಲು ಬಳಸುತ್ತಿದ್ದ ರಾಡ್, ಚಾಕು ಸೇರಿ ವಿವಿಧ ಬಗೆಯ ಆಯುಧವನ್ನು ಪೊಲೀಸರು ಜಪ್ತು ಮಾಡಿದ್ದಾರೆ.
ಧಾರವಾಡದ ಅಜಯ ಪಕ್ಕೀರಪ್ಪ ಮಡ್ಲಿ ಅವರು ಮಾರ್ಚ 28ರಂದು ಮುಂಡಗೊಡಿಗೆ ಬಂದಿದ್ದರು. ಆ ದಿನ ರಾತ್ರಿ ಅವರು ಟಿಬೇಟಿಯನ್ ಕ್ಯಾಂಪ್ ಕಡೆಯಿಂದ ತೆಗ್ಗಿನಕೊಪ್ಪ ರಸ್ತೆಯಂಚಿನಲ್ಲಿ ಮಾರಕ ವಸ್ತುಗಳನ್ನು ಹಿಡಿದು ನಿಂತಿದ್ದರು. ಆ ಮಾರ್ಗವಾಗಿ ಬರುವ ಜನರ ಮೇಲೆ ಕೆಂಪು ಬಣ್ಣದ ಬೆಳಕು ಬಿಟ್ಟು ಹೆದರಿಸುವುದು ಅವರ ಉದ್ದೇಶವಾಗಿತ್ತು. ಹೆದರದವರ ಮೇಲೆ ಹಲ್ಲೆ ನಡೆಸಿ, ಖಾರದಪುಡಿ ಎರಚಲು ಅವರು ಸಿದ್ಧತೆ ಮಾಡಿಕೊಂಡಿದ್ದರು. ದಾರಿಹೋಕರ ಬಳಿಯಿದ್ದ ಚಿನ್ನ-ಹಣ ದೋಚಿ ಪರಾರಿಯಾಗಲು ಎಲ್ಲಾ ಬಗೆಯ ಸಿದ್ಧತೆ ಮಾಡಿದ್ದರು.
ಈ ವಿಷಯ ಅರಿತ ಪಿಸೈ ಮಂಜುನಾಥ ಗೌಡರ್ ಅವರು ಅದೇ ಮಾರ್ಗವಾಗಿ ಹೋದರು. ಪೊಲೀಸ್ ಸಿಬ್ಬಂದಿ ಜೊತೆ ಹೊರಟ ಮಂಜುನಾಥ ಗೌಡರ್ ಅವರು ಡಕಾಯಿತನ ಹೆಡೆಮುರಿ ಕಟ್ಟಿದರು. ಅಜಯ ಮಡ್ಲಿ ಅವರ ಬಳಿಯಿದ್ದ ಬೈಕನ್ನು ಜಪ್ತು ಮಾಡಿ ಕಾನೂನು ಕ್ರಮ ಜರುಗಿಸಿದರು. ಖಾರದಪುಡಿ, ಚಾಕು, ರಾಡುಗಳನ್ನು ವಶಕ್ಕೆಪಡೆದು ನ್ಯಾಯಾಲಯಕ್ಕೆ ಒಪ್ಪಿಸಿದರು. ಡಕಾಯಿತನ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದರು.