ಸಾಮರ್ಥ್ಯಕ್ಕಿಂತಲೂ ಅಧಿಕ ಭಾರ ಹೊತ್ತು ಅಂಕೋಲಾದಲ್ಲಿ ಅಲೆದಾಡುತ್ತಿದ್ದ ಲಾರಿಯನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಲಾರಿ ಚಾಲಕನೂ ಕಂಠಪೂರ್ತಿ ಕುಡಿದು ಲಾರಿ ಓಡಿಸುತ್ತಿರುವುದು ಗೊತ್ತಾಗಿದೆ. ಪೊಲೀಸರು ಆ ಲಾರಿ ತಡೆದ ಪರಿಣಾಮ ಜನರ ಜೀವ ಉಳಿದಿದೆ.
ಬಾಗಲಕೋಟೆಯ ನಾಗಪ್ಪ ಮಾದರ್ ಅವರು ಲಾರಿಯೊಂದರಲ್ಲಿ ಕೋಕ್ ಸಾಗಿಸುತ್ತಿದ್ದರು. ಹೆಚ್ಚುವರಿ ಹಣದ ಆಸೆಗಾಗಿ ಅವರು ಲಾರಿ ಸಾಮರ್ಥ್ಯಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಕೋಕ್ ತುಂಬಿಸಿದ್ದರು. ಮಾರ್ಚ 27ರಂದು ಅಂಕೋಲಾದಿAದ ಯಲ್ಲಾಪುರ ಕಡೆಗೆ ಆ ಲಾರಿ ವೇಗವಾಗಿ ಸಾಗಿದ್ದು, ಎಕ್ಕೆಗುಳಿ ಕ್ರಾಸಿನ ಹತ್ತಿರ ಆ ಲಾರಿ ಬಲಬದಿಗೆ ಬಂದಿತು. ಅಲ್ಲಿದ್ದ ಲೈನ್ ಕ್ರಾಸ್ ಮಾಡಿದಲ್ಲದೇ ಲಾರಿ ಅಡ್ಡಾದಿಡ್ಡಿ ಓಡಿರುವುದನ್ನು ಪಿಸೈ ದೇವಿದಾಸ ಚಾಪೋಲಿಕರ್ ಅವರು ಗಮನಿಸಿದರು. ತಕ್ಷಣ ಅವರು ಅಲ್ಲಿಗೆ ಧಾವಿಸಿ ಲಾರಿಯನ್ನು ತಡೆದರು.
ಲಾರಿ ಚಾಲಕ ನಾಗಪ್ಪ ಮಾದರ್ ಅವರು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಅದಾಗಿಯೂ, ಪೊಲೀಸರು ಅವರ ಬಾಯಿಯ ಬಳಿ ಆಲ್ಕೋ ಮೀಟರ್ ಹಿಡಿದರು. ಬ್ರೀಥ್ ಅನಾಲೈಸರ್ ಟೆಸ್ಟ್ ಮಾಡಿಸಿದಾಗ ಚಾಲಕ ವಿಪರೀತ ಪ್ರಮಾಣದಲ್ಲಿ ಮದ್ಯ ಸೇವಿಸಿರುವುದು ಗೊತ್ತಾಯಿತು. ಅದಾದ ನಂತರ ಸಮೀಪದಲ್ಲಿದ್ದ ಐ ಆರ್ ಬಿ ಕಂಪನಿಯ ವೇಬ್ರಿಜ್ ಕಡೆ ಲಾರಿ ಓಡಿಸಿ ತೂಕ ಮಾಡಿಸಲಾಯಿತು. ಆಗ, ಲಾರಿಯಲ್ಲಿ 2760ಕೆಜಿ ಅಧಿಕ ಬಾರದ ಕೋಕ್ ಸಾಗಿಸುತ್ತಿರುವುದು ದೃಢವಾಯಿತು. ಪೊಲೀಸರು ಚಾಲಕನನ್ನು ಮತ್ತೊಮ್ಮೆ ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದು, ವೈದ್ಯರು ಸಹ ಚಾಲಕ ಅಮಲಿನಲ್ಲಿರುವುದನ್ನು ಖಚಿತಪಡಿಸಿದರು.
ಅಧಿಕ ಭಾರ ಸಾಗಾಟ ಹಾಗೂ ಅಮಲಿನಲ್ಲಿ ಲಾರಿ ಓಡಿಸಿದ ಚಾಲಕನ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದರು. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಚಾಲಕ ಮಾಡಿದ ತಪ್ಪಿನ ಬಗ್ಗೆ ನ್ಯಾಯಾಲಯಕ್ಕೆ ವರದಿ ಒಪ್ಪಿಸಿದರು.