ದಿನಕ್ಕೆ 10 ಸಾವಿರ ರೂ ದುಡಿಯುವ ಆಸೆಯಿಂದ ಗಾಂಜಾ ವ್ಯಾಪಾರ ಶುರು ಮಾಡಿದ್ದ ದಾಂಡೇಲಿಯ ಥಾಕೇಶ್ ಅಮೋದೆ ಜೈಲು ಪಾಲಾಗಿದ್ದಾರೆ. 10 ಸಾವಿರ ರೂ ಮೌಲ್ಯದ ಗಾಂಜಾಹಿಡಿದು ಗಿರಾಕಿ ಹುಡುಕುತ್ತಿದ್ದ ಥಾಕೇಶ್ ಅಮೋದೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದು ಪೊಲೀಸರು ಕಠಿಣ ಕ್ರಮ ಜರುಗಿಸಿದ್ದಾರೆ.
ದಾಂಡೇಲಿಯ ಗಣೇಶನಗರದಲ್ಲಿ ಥಾಕೇಶ್ ಮಾನಿಕ್ ಅಮೋದೆ ಅವರು ವಾಸವಾಗಿದ್ದರು. 23 ವರ್ಷದ ಅವರಿಗೆ ದುಡಿದು ತಿನ್ನುವ ಬಗ್ಗೆ ಹೆಚ್ಚಿನ ಆಸಕ್ತಿಯಿರಲಿಲ್ಲ. ಹೇಗಾದರೂ ಮಾಡಿ ಬೇಗ ದುಡ್ಡು ಮಾಡಬೇಕು ಎಂಬ ಆತುರಕ್ಕೆ ಬಿದ್ದ ಥಾಕೇಶ್ ಅಮೋದೆ ಅವರು ಅಡ್ಡದಾರಿ ಹಿಡಿದರು. ಸ್ಕೂಟಿಯಲ್ಲಿ ಗಾಂಜಾ ತುಂಬಿಸಿ ಅದನ್ನು ವಿವಿಧ ಕಡೆ ಸಾಗಿಸುವ ಪ್ರಯತ್ನ ಮಾಡಿದ್ದು, ಅದೇ ವೇಳೆ ಪೊಲೀಸರಿಗೆ ಸಿಕ್ಕಿ ಬಿದ್ದರು.
ಮಾರ್ಚ 29ರಂದು ದಾಂಡೇಲಿ ನಗರದ ಡಿ ಎಫ್ ಎ ಮೈದಾನದ ಬಳಿಯಿರುವ ಹಳೆ ಆರ್ ಟಿ ಓ ಕಚೇರಿ ಹತ್ತಿರ ಥಾಕೇಶ್ ಅಮೋದೆ ಅವರು ನಿಂತಿದ್ದರು. ಪೊಲೀಸ್ ಜೀಪ್ ಚಾಲಕ ಮಹಾಂತೇಶ ಜಾಮಗೌಡ ಅವರ ಜೊತೆ ಪಿಸೈ ಅಮೀನಸಾಬ್ ಅತ್ತಾರ್ ಅವರು ನಗರ ಸಂಚಾರ ನಡೆಸಿದ್ದರು. ಈ ವೇಳೆ ಅನುಮಾನಾಸ್ಪದ ರೀತಿ ಕಾಣಿಸಿದ ಥಾಕೇಶ್ ಅಮೋದೆ ಅವರನ್ನು ಅವರು ಮಾತನಾಡಿಸಿದರು. ಪಿಸೈ ಕಿರಣ ಬಿ ಪಾಟೀಲ, ಸಿಬ್ಬಂದಿ ಬಸವರಾಜ ತೇಲಸಂಗ, ಕೃಷ್ಣ ಬೆಳ್ಳುವರಿ, ಚಂದ್ರಶೇಖರ ಪಾಟೀಲ, ಇಮ್ರಾನ್ ಕಂಬಾರಗಣವಿ, ರಮೇಶ ನಿಂಬರAಗಿ, ಜಯನಗೌಡ ಪಾಟೀಲ್ ಸಹ ಅಲ್ಲಿಗೆ ಧಾವಿಸಿದರು. ಅವರೆಲ್ಲರೂ ಸೇರಿ ಸ್ಕೂಟಿಯ ಶೋಧ ನಡೆಸಿದಾಗ ಬಟ್ಟೆಯಲ್ಲಿ ಕಟ್ಟಿದ ಚೀಲವೊಂದು ಕಾಣಿಸಿತು. ಅದನ್ನು ತೆರೆದು ನೋಡಿದಾಗ ಅಲ್ಲಿ 253 ಗ್ರಾಂ ತೂಕದ ಗಾಂಜಾ ಸಿಕ್ಕಿತು.
ಕೂಡಲೇ ಪೊಲೀಸರು ಆ ಮಾದಕ ವಸ್ತುವನ್ನು ವಶಕ್ಕೆಪಡೆದರು. ಸ್ಕೂಟಿಯನ್ನು ಜಪ್ತು ಮಾಡಿದರು. ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಥಾಕೇಶ್ ಅಮೋದೆ ಅವರನ್ನು ಬಂಧಿಸಿದರು. ನಿಷೇಧಿತ ವಸ್ತು ಮಾರಾಟ ಹಾಗೂ ಸೇವನೆಯ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸಿದ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿದರು. ಆರೋಪಿಯನ್ನು ನ್ಯಾಯಾಲಯಕ್ಕೆ ಒಪ್ಪಿಸಿದರು. ಪ್ರಕರಣದ ಗಂಭೀರತೆ ಅರಿತ ನ್ಯಾಯಾಲಯ ಥಾಕೇಶ್ ಮಾನಿಕ್ ಅಮೋದೆ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿತು.