ಕುಮಟಾದ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಐಡಿ ಕಾರ್ಡ ಮಾಡಿಸಲು ಪ್ರಾಚಾರ್ಯೆ ವಿಜಯಾ ನಾಯ್ಕ ಅವರು 53 ರೂ ವಸೂಲಿ ಮಾಡಿದ್ದು, ಅದರ ಲೆಕ್ಕ ಒಪ್ಪಿಸದ ಕಾರಣ ಭಾರೀ ಪ್ರಮಾಣದ ಪ್ರತಿಭಟನೆ ಎದುರಿಸಿದ್ದಾರೆ. `ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ’ ಎಂಬ ಪುರಂದರದಾಸರ ವಾಣಿಗೆ ವಿರುದ್ಧವಾಗಿ ಗುರುಗಳನ್ನೇ ಗುಲಾಮರಾಗಿಸಿದ ಪ್ರತಿಭಟನಾಕಾರರು 53ರೂಪಾಯಿಗಾಗಿ ಆ ಪ್ರಾಚಾರ್ಯರ ಜೊತೆ ಉಪನ್ಯಾಸಕರು ಸಹ ಕ್ಷಮೆ ಕೋರುವಂತೆ ಮಾಡಿದ್ದಾರೆ!
ಕಾಲೇಜಿಗೆ ವಿದ್ಯಾರ್ಥಿ ದಾಖಲಾಗುವ ಪೂರ್ವದಲ್ಲಿ ದಾಖಲಾತಿ ಶುಲ್ಕ ಪಡೆಯಲಾಗುತ್ತದೆ. ಆ ಶುಲ್ಕದಲ್ಲಿ ಕಾಲೇಜು ಅಭಿವೃದ್ಧಿ, ಕ್ರೀಡೆ, ಗ್ರಂಥಾಲಯ ಸೇರಿದಂತೆ ವಿವಿಧ ವಿಭಾಗಕ್ಕೆ ಶುಲ್ಕ ವಿಂಗಡಣೆ ಮಾಡಲಾಗುತ್ತದೆ. ಅದರಂತೆ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿ ಕೊಡುವುದಕ್ಕೆ ಸಹ 53 ರೂಪಾಯಿಪಡೆಯಲಾಗಿದ್ದು, `ಕೆಲ ವಿದ್ಯಾರ್ಥಿಗಳು ತಮಗೆ ಗುರುತಿನ ಚೀಟಿ ಅಗತ್ಯವಿಲ್ಲ. ಆ ಹಣ ಮರಳಿಸಿ’ ಎಂದು ಕೇಳಿದ್ದಾರೆ. ಆದರೆ, ಸರ್ಕಾರಿ ನಿಯಮಗಳ ಪ್ರಕಾರ ಪ್ರತಿಯೊಬ್ಬ ವಿದ್ಯಾರ್ಥಿಗಳು ಗುರುತಿನ ಚೀಟಿಪಡೆಯುವುದು ಕಡ್ಡಾಯವಾಗಿದ್ದು, ಆ ಹಣ ಮರಳಿಸಲು ಅಸಾಧ್ಯ’ ಎಂದು ಪ್ರಾಚಾರ್ಯೆ ವಿಜಯಾ ನಾಯ್ಕ ಅವರು ಹೇಳಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಸಿಟ್ಟಾಗಿದ್ದು, ಅದೇ ವೇಳೆ ಹಾಜರಾತಿ ಕಡಿಮೆಯಿರುವ ವಿದ್ಯಾರ್ಥಿಗಳ ಬಗ್ಗೆ ಪ್ರಾಚಾರ್ಯರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಈ ವೇಳೆ ವಿದ್ಯಾರ್ಥಿಗಳೇ ತಪ್ಪೊಪ್ಪಿಗೆಯನ್ನು ಬರೆದುಕೊಟ್ಟಿದ್ದಾರೆ.
ಆದರೆ, ಈ ಎಲ್ಲಾ ಘಟನಾವಳಿಗಳ ನಂತರ ಕಾಲೇಜಿಗೆ ಇನ್ನಿತರರ ಪ್ರವೇಶವಾಗಿದೆ. 53 ರೂಪಾಯಿ ವಿಷಯದಲ್ಲಿ ವಿದ್ಯಾರ್ಥಿಗಳಿಗೆ ಆದ ಅನ್ಯಾಯವನ್ನು ಖಂಡಿಸಿದ್ದು, ಈ ವಿಷಯ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಪಾಲಕರ ಹೆಸರಿನಲ್ಲಿ ಒಬ್ಬರು ಕಾಲೇಜು ಪ್ರಾಚಾರ್ಯೆ ಹಾಗೂ ಉಪನ್ಯಾಸಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಜೊತೆಗೆ ಪ್ರಾಚಾರ್ಯರು ಸಹ ಪಾಲಕರು ಹಾಗೂ ವಿದ್ಯಾರ್ಥಿಗಳಿಬ್ಬರ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ. ವಿದ್ಯಾರ್ಥಿಗಳ ವಿರುದ್ಧ ಪೊಲೀಸ್ ದೂರು ದಾಖಲಾಗಿದ್ದರಿಂದ ಅವರ ಭವಿಷ್ಯದ ಬಗ್ಗೆ ಪ್ರಶ್ನೆ ಎದುರಾಗಿದ್ದು, ಇನ್ನಿತರ ವಿದ್ಯಾರ್ಥಿಗಳು ಸೇರಿ ಪ್ರತಿಭಟನೆ ಶುರು ಮಾಡಿದ್ದಾರೆ. ಆ ಪ್ರತಿಭಟನೆ ಅಂಗವಾಗಿ ರಾಜಕೀಯ ನಾಯಕರು ಕಾಲೇಜು ಆವರಣ ಪ್ರವೇಶಿಸಿ ಭಾಷಣ ಮಾಡಿದ್ದಾರೆ.
`ಪ್ರಾಚಾರ್ಯರನ್ನು ಅಮಾನತು ಮಾಡಬೇಕು. ಜೊತೆಗೆ ಇಲ್ಲಿಂದ ವರ್ಗಾಯಿಸಬೇಕು’ ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾಗಿದ್ದು, `ಅಲ್ಲಿಗೆ 53 ರೂ ಮರಳಿಸಬೇಕು’ ಎಂಬ ಮುಖ್ಯ ಬೇಡಿಕೆ ನೆನೆಗುದಿಗೆ ಬಿದ್ದಿದೆ. ಪ್ರತಿಭಟನೆಗೆ ಬೆದರಿದ ಪ್ರಾಚಾರ್ಯೆ ವಿಜಯ ನಾಯ್ಕ ಅವರು ಈ ಪ್ರಕರಣ ಇಲ್ಲಿಗೆ ಮುಗಿಸುವುದಕ್ಕಾಗಿ ಕ್ಷಮೆ ಕೋರಿದ್ದಾರೆ. ಪ್ರತಿಭಟನಾಕಾರರ ಜೊತೆ ಫೋನಿನಲ್ಲಿ ಮಾತನಾಡಿದ ಉಸ್ತುವಾರಿ ಸಚಿವರು ಕ್ರಮ ಜರುಗಿಸುವ ಭರವಸೆಯನ್ನು ನೀಡಿದ್ದಾರೆ. ಆದರೆ, ಈ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಿದರೂ 53ರೂ ಹಿಂಪಡೆಯಲು ಸಾಧ್ಯವಾಗಿಲ್ಲ. ಐಡಿ ಕಾರ್ಡ ಮಾಡಿಸಲುಪಡೆದ ಹಣವನ್ನು ಮರಳಿಸಲು ಕಾನೂನಿನಲ್ಲಿಯೂ ಅವಕಾಶವಿಲ್ಲದ ಕಾರಣ ಐಡಿ ಕಾರ್ಡಪಡೆಯುವುದೊಂದೇ ವಿದ್ಯಾರ್ಥಿಗಳಿಗಿರುವ ದಾರಿ.