ಜನಗಣತಿಗೆ ನಿಯೋಜನೆಯಾಗಿರುವ ಗಣತಿದಾರರು ಹೊಸ ಸಮಸ್ಯೆಯೊಂದರ ಬಗ್ಗೆ ಸರ್ಕಾರದ ಗಮನಸೆಳೆದಿದ್ದಾರೆ. `ಬೀದಿ ನಾಯಿಗಳ ಜೊತೆ ಮನೆ ಮನೆಯಲ್ಲಿ ಸಾಕಿರುವ ನಾಯಿಗಳಿಂದ ರಕ್ಷಣೆ ಕೊಡಬೇಕು’ ಎಂದು ಗಣತಿದಾರರು ಆಗ್ರಹಿಸಿದ್ದಾರೆ.
ಈ ಬಗ್ಗೆ ಶಿರಸಿ ತಹಶೀಲ್ದಾರ ಪಟ್ಟರಾಜ ಗೌಡಾ ಹಾಗಾ ಪೌರಾಯುಕ್ತ ಪ್ರಕಾಶ ಚನ್ನಪ್ಪನವರ್ ಅವರಿಗೆ ಗಣತಿದಾರರು ಮನವಿ ಸಲ್ಲಿಸಿದ್ದಾರೆ. ಗ್ರಾಮೀಣ ಭಾಗದ ಕರ್ತವ್ಯದ ವೇಳೆ ಕಾಡು ಪ್ರಾಣಿಗಳ ಹಾವಳಿಯಿಂದಲೂ ಜೀವಭಯ ಎದುರಾಗುತ್ತಿರುವ ಬಗ್ಗೆ ಅವರು ವಿವರಿಸಿದ್ದಾರೆ. `ಈಚೆಗೆ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಬೀದಿ ನಾಯಿಗಳ ಸಮಸ್ಯೆ ಹೆಚ್ಚಾಗಿದೆ. ಅದರೊಂದಿಗೆ ಅನೇಕರು ಹವ್ಯಾಸಕ್ಕಾಗಿ ವಿಶೇಷ ತಳಿಗಳ ನಾಯಿ ಸಾಕುತ್ತಿದ್ದಾರೆ. ಅಪರಿಚಿತರು ಮನೆ ಬಳಿ ಹೊದಾಗ ಅಂಥ ನಾಯಿಗಳು ದಾಳಿ ಮಾಡುತ್ತಿದ್ದು, ಗಣತಿಗೆ ಇದೇ ದೊಡ್ಡ ಸಮಸ್ಯೆಯಾಗಿದೆ’ ಎಂದವರು ವಿವರಿಸಿದ್ದಾರೆ.
`ಅನೇಕರ ಮನೆಯ ಬಳಿ ಒಳಗೆ ಜರ್ಮನ್ ಷಫರ್ಡ, ಮುಧೋಳ, ಪಮೇರಿಯನ್ ಪ್ರಬೇದದ ನಾಯಿಗಳಿವೆ. ದೇಶಿ ತಳಿಯ ನಾಯಿಗಳನ್ನು ಸಾಕುವವರ ಸಂಖ್ಯೆಯೂ ಕಡಿಮೆ ಏನಿಲ್ಲ. ಆದರೆ, ಆ ನಾಯಿಗಳಿಗೆ ಮಾಲಕರು ಶಿಸ್ತು ಕಲಿಸಿಲ್ಲ. ಕಪೌಂಡ್ ಒಳಗಿನ ಬೋನಿನಲ್ಲಿ ನಾಯಿಯನ್ನು ಬಂಧಿಸುತ್ತಿಲ್ಲ. ಅಂಥ ನಾಯಿಗಳು ಮನೆ ಯಜಮಾನನ ಹಿಡಿತಕ್ಕೂ ಸಿಗದೇ ಗಣತಿದಾರರಿಗೆ ಅಪಾಯ ತರುತ್ತಿದೆ’ ಎಂದವರು ನೋವು ತೋಡಿಕೊಂಡಿದ್ದಾರೆ. `ಗ್ರಾಮೀಣ ಭಾಗಗಳಿಗೆ ಗಣತಿಗೆ ಹೋದಾಗ ಕಾಡು ಪ್ರಾಣಿಗಳ ಹಾವಳಿ ಎದುರಾಗುತ್ತಿದೆ. ಊರುಗಳಿಗೆ ಕಾಡು ಪ್ರಾಣಿಗಳು ನುಗ್ಗುವುದರಿಂದ ಗಣತಿ ಕಾರ್ಯದಲ್ಲಿ ತೊಡಗಿದ ಮಹಿಳೆಯರು ಭಯಭೀತರಾಗಿದ್ದಾರೆ. ಈ ಜೀವಿಗಳಿಂದ ತಮಗೆ ರಕ್ಷಣೆ ಕೊಡಿ’ ಎಂದು ಮನವಿ ಮಾಡಿದ್ದಾರೆ.
`ನಾಯಿ ಸಾಕುವವರಿಗೆ ಪಶು ಇಲಾಖೆಯಿಂದ ಎಚ್ಚರಿಕೆ ಕೊಡಬೇಕು. ಸಾಕಷ್ಟು ಮುನ್ನಚ್ಚರಿಕೆವಹಿಸುವಂತೆ ಸೂಚಿಸಬೇಕು. ಭವಿಷ್ಯದಲ್ಲಿ ಎದುರಾಗಬಹುದಾದ ಅವಘಡ ತಪ್ಪಿಸಿ, ನೌಕರರಿಗೆ ಸುಗಮವಾಗಿ ಕೆಲಸ ಮಾಡಲು ಅನುಕೂಲ ಮಾಡಿಕೊಡಬೇಕು. ಅದಾಗಿಯೂ, ನಾಯಿ ದಾಳಿ ನಡೆದರೆ ಅದನ್ನು ಸಾಕುವವರಿಗೆ ಶಿಕ್ಷೆ-ದಂಡದ ಜೊತೆ ಸಂತ್ರಸ್ತ ನೌಕರರಿಗೆ ಪರಿಹಾರ ಒದಗಿಸಬೇಕು’ ಎಂದು ಆಗ್ರಹಿಸಿದರು.