ತಿಂಗಳ ಹಿಂದೆ ಮಹಿಳೆಯರಿಂದ ಪೆಟ್ಟು ತಿಂದು ಮರ್ಮಾಂಗಕ್ಕೆ ನೋವು ಮಾಡಿಕೊಂಡಿದ್ದ ದಾಂಡೇಲಿಯ ನಾಗರಾಜ ಬಾದರದಿನ್ನೆ ಅವರು ಇದೀಗ ಚೇತರಿಸಿಕೊಂಡಿದ್ದು, ಇದೀಗ ಮತ್ತೆ ಐದು ಜನ ಸೇರಿ ಅವರಿಗೆ ಥಳಿಸಿದ್ದಾರೆ. ಈ ಬಾರಿಯೂ ನಾಗರಾಜ ಬಾದರದಿನ್ನೆ ಅವರ ಮರ್ಮಾಂಗಕ್ಕೆ ಪೆಟ್ಟು ಬಿದ್ದಿದೆ!
ದಾಂಡೇಲಿಯ ಜಾಂಬೆಚಾಳದಲ್ಲಿ ವಾಸವಾಗಿರುವ ನಾಗರಾಜ ದಿನ್ನೆ ಅವರು ತಮ್ಮ ಆರೋಗ್ಯ ಸುಧಾರಿಸಿದ ನಂತರ ಹಾಲೆಮಡ್ಡಿಯ ದಾಂಡೇಲಪ್ಪ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನಪಡೆದಿದ್ದರು. ಟಿಂಬರ್ ಡಿಪೋ ರಸ್ತೆ ಮೂಲಕ ಹಳೆ ದಾಂಡೇಲಿಗೆ ಹೋಗುತ್ತಿದ್ದ ನಾಗರಾಜ ಬಾದರದಿನ್ನೆ ಅವರಿಗೆ ಅಲ್ಲಿನ ಗಣಪತಿ ದೇವಸ್ಥಾನದ ಹಿಂದಿರುವ ಗೂಡಂಗಡಿಯಲ್ಲಿ ತಿಂಡಿ ತಿನ್ನುವ ಬಯಕೆಯಾಯಿತು. ಹೀಗಾಗಿ ಅವರು ಅಲ್ಲಿ ತಿಂಡಿ ತಿನ್ನಲು ತೆರಳುವ ವೇಳೆ ರಸ್ತೆ ಮೇಲಿದ್ದ ಮಾರಿಯೋ ಫ್ರಾನ್ಸೆಸ್ ಅವರು ನಾಗರಾಜ ಬಾದರದಿನ್ನೆ ಅವರನ್ನು ಅಡ್ಡಗಟ್ಟಿದರು. ಮಾರಿಯೋ ಫ್ರಾನ್ಸೆಸ್ ಅವರ ಜೊತೆ ಪ್ರಾನ್ಸಿಸ್ ಮಂಡೇಸ್ ಅವರು ಇದ್ದು, ಜೊತೆಗೆ ಅಪರಿಚಿತ ಮೂವರಿದ್ದರು. ಈ ಹಿಂದೆ ನಡೆದಿದ್ದ ಹೊಡೆದಾಟ ಪ್ರಕರಣ ವಿಷಯವಾಗಿ ನಾಗರಾಜ ಬಾದರದಿನ್ನೆ ಹಾಗೂ ಪ್ರಾನ್ಸಿಸ್ ಮಂಡೇಸ್ ಅವರ ನಡುವೆ ಜಗಳ ಶುರುವಾಯಿತು. ಆ ಜಗಳ ಹೊಡೆದಾಟದ ಸ್ವರೂಪಪಡೆದಿದ್ದು, ಪ್ರಾನ್ಸಿಸ್ ಮಂಡೇಸ್ ಕಡೆಯವರು ನಾಗರಾಜ ಬಾದರದಿನ್ನೆ ಅವರ ಕೆನ್ನೆಗೆ ಬಾರಿಸಿದರು. ಅದಾದ ನಂತರ ಅವರಲ್ಲಿದ್ದ ಚಾಕುವಿನಿಂದ ದಾಳಿ ಮಾಡಿದರು. ಈ ವೇಳೆ ನೆಲಕ್ಕೆ ಬಿದ್ದ ನಾಗರಾಜ ಬಾದರದಿನ್ನೆ ಅವರ ಮರ್ಮಾಂಗಕ್ಕೆ ಗುದ್ದಿ ನೋವು ಮಾಡಿದರು. ತಮ್ಮ ಈ ನೋವಿನ ಬಗ್ಗೆ ನಾಗರಾಜ ಬಾದರದಿನ್ನೆ ಅವರು ದಾಂಡೇಲಿ ಪೊಲೀಸರಿಗೆ ದೂರಿ, ಪ್ರಕರಣ ದಾಖಲಿಸಿದರು.
ಆ ದಿನ ಏನಾಗಿತ್ತು? ಇಲ್ಲಿ ಓದಿ: ಮಹಿಳಾ ಮಣಿಗಳಿಂದ ಥಳಿತ: ಪುರುಷನ ಪೌರುಷಕ್ಕೆ ಆಘಾತ!
ಆದರೆ, ಇದೇ ವಿಷಯವಾಗಿ ಪೊಲೀಸರಿಗೆ ಇನ್ನೊಂದು ಮಾಹಿತಿ ನೀಡಿದ ಮಾರಿಯೋ ಪ್ರಾನ್ಸಿಸ್ ಡಿಸೋಜಾ ಅವರು `ನಾಗರಾಜ ಹೊನ್ನಪ್ಪ ಬಾದರದಿನ್ನಿ ಅವರೇ ತಮ್ಮ ಮೇಲೆ ದಾಳಿ ಮಾಡಿದ್ದಾರೆ’ ಎಂದು ದೂರಿದ್ದಾರೆ. `ಪಿಯುಸಿ ವಿದ್ಯಾರ್ಥಿಯಾಗಿರುವ ತಾನು ಪರೀಕ್ಷೆ ಮುಗಿಸಿ ಎರಡು ವಾರದಲ್ಲಿ ದಾಂಡೇಲಿ ಅರಣ್ಯ ಇಲಾಖೆಯ ಟಿಂಬರ್ ಡೀಪೋದಲ್ಲಿ ಕೆಲಸ ಮಾಡುತ್ತಿದ್ದೇನೆ. ಹೀಗಿರುವಾಗ ಜಾಂಬೆಚಾಳ ನಾಗರಾಜ ಹೊನ್ನಪ್ಪ ಬಾದರದಿನ್ನಿ ಅವರು ಕಳೆದ ಮೂರು ದಿನದಿಂದ ಹಿಂಬಾಲಿಸುತ್ತಿದ್ದು, `ನಿನ್ನ ತಾಯಿ ನೀಡಿದ ದೂರು ಹಿಂಪಡೆಯಬೇಕು’ ಎಂದು ಬೆದರಿಸುತ್ತಿದ್ದಾರೆ. ಕೆಲಸ ಮುಗಿಸಿ ಮನೆಗೆ ಹೋಗಲು ಹಾರ್ನಬಿಲ್ ಭವನದ ಬಳಿ ನಿಂತಾಗ ಬೈಕಿನಲ್ಲಿ ಬಂದ ನಾಗರಾಜ ಬಾದರದಿನ್ನಿ ತನ್ನ ಕನ್ನಡಕ ತೆಗೆದು ಬಿಸಾಡಿ ಕೆನ್ನೆಗೆ ಹೊಡೆದಿದ್ದಾರೆ. ಅಲ್ಲಿದ್ದ ಮಣ್ಣಿನ ಹಂಟೆಯಿoದ ಹೊಡೆದು ನೋವು ಮಾಡಿದ್ದಾರೆ. ಧರಿಸಿದ್ದ ಶರ್ಟ ಹರಿದು ಅವಮಾನ ಮಾಡಿದ್ದಾರೆ. ಈ ವೇಳೆ ಪ್ರಾನ್ಸಿಸ್ ಮಂಡೇಸ್ ಆಗಮಿಸಿ ತನ್ನನ್ನು ರಕ್ಷಿಸಿದ್ದಾರೆ’ ಎಂದು ಮಾರಿಯೋ ಪ್ರಾನ್ಸಿಸ್ ಡಿಸೋಜಾ ಅವರು ದೂರಿದ್ದಾರೆ. ಎರಡು ಕಡೆಯವರ ಮಾತು ಆಲಿಸಿದ ಪೊಲೀಸರು ಪ್ರಕರಣ ದಾಖಲಿಸಿ ಸತ್ಯಾಸತ್ಯತೆಯ ಬಗ್ಗೆ ತನಿಖೆ ಶುರು ಮಾಡಿದ್ದಾರೆ.