ಹೊನ್ನಾವರದಲ್ಲಿ ಅಪಘಾತದಲ್ಲಿ ಕಾಂಗ್ರೆಸ್ ಹಿಂದುಳಿದ ವರ್ಗದ ಅಧ್ಯಕ್ಷ ಬಾಲಚಂದ್ರ ನಾಯ್ಕ ಅವರ ಮಗ ಕಿರಣ ನಾಯ್ಕ ಅವರು ಸಾವನಪ್ಪಿದ್ದಾರೆ. ಸ್ನೇಹಿತನ ತಾಯಿಯ ಅನಾರೋಗ್ಯದ ಸುದ್ದಿ ಕೇಳಿ ಅಲ್ಲಿಗೆ ಹೋಗಿ ಮರಳುತ್ತಿದ್ದ ಕಿರಣ ನಾಯ್ಕ ಅವರು ಬಾರದ ಲೋಕಕ್ಕೆ ತೆರಳಿದ್ದಾರೆ.
ಹೊನ್ನಾವರದ ಕೆಳಗಿನ ಇಡಗುಂಜಿ ಮೂಲದ ಕಿರಣ ನಾಯ್ಕ ಅವರು ಬುಧವಾರ ರಾತ್ರಿ ಬೈಕಿನಲ್ಲಿ ಸಂಚರಿಸುತ್ತಿದ್ದರು. ಕಾಸರಕೋಡ ಗ್ರಾಮದ ದುರ್ಗಾಂಬಾ ಹೋಟೆಲ್ ಎದುರು ಅವರಿಗೆ ಅಪರಿಚಿತ ವಾಹನವೊಂದು ಡಿಕ್ಕಿಯಾಗಿದೆ. ಸ್ಥಳದಲ್ಲಿಯೇ ಕಿರಣ ನಾಯ್ಕ ಅವರು ಸಾವನಪ್ಪಿದ್ದಾರೆ. ಕಿರಣ ನಾಯ್ಕ ಅವರಿಗೆ ಗುದ್ದಿದ ವಾಹನ ಯಾವುದು ಎಂದು ಗೊತ್ತಾಗಿಲ್ಲ. ಈ ಭಾಗದಲ್ಲಿ ಅಪಾರ ಪ್ರಮಾಣದಲ್ಲಿ ಅಕ್ರಮ ಮರಳು ಸಾಗಾಟ ನಡೆಯುತ್ತಿದ್ದು, ಮರಳು ಸಾಗಾಟದ ಲಾರಿಯೇ ಗುದ್ದಿರುವ ಅನುಮಾನಗಳು ವ್ಯಕ್ತವಾಗಿದೆ. ಈ ಬಗ್ಗೆಯೂ ತನಿಖೆ ಮುಂದುವರೆದಿದೆ.
ಕಿರಣ ನಾಯ್ಕ ಅವರ ತಂದೆ ಬಾಲಚಂದ್ರ ನಾಯ್ಕ ಅವರು ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗ ಅಧ್ಯಕ್ಷರಾಗಿದ್ದಾರೆ. ಅಪಘಾತದ ವಿಷಯ ಅರಿತು ಕುಟುಂಬದವರ ಜೊತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಮರು ದಿನ ಬೆಳಗ್ಗೆ ಸಾವಿರಾರು ಜನ ಆಗಮಿಸಿ ಬಾಲಚಂದ್ರ ನಾಯ್ಕ ಅವರಿಗೆ ಸಾಂತ್ವಾನ ಹೇಳಿದ್ದು, ಕಿರಣ ನಾಯ್ಕ ಅವರ ಅಂತಿಮ ದರ್ಶನಪಡೆದರು. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಕುಮಟಾ ಬ್ಲಾಕ್ ಅಧ್ಯಕ್ಷ ಭುವನ್ ಭಾಗವತ್, ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್ ನಾಯ್ಕ್, ಮಂಕಿ ಬ್ಲಾಕ್ ಅಧ್ಯಕ್ಷ ಗೋವಿಂದ ನಾಯ್ಕ್ ಆಸ್ಪತ್ರೆಗೆ ಭೇಟಿ ನೀಡಿದರು.