`ಸಿದ್ದಾಪುರದ ಪ್ರಭು ದೊಡ್ಡಮನಿ ಅವರು ನಿಯಮಬಾಹಿರವಾಗಿ ಪ್ರಮಾಣ ಪತ್ರಪಡೆಯುವ ಪ್ರಯತ್ನ ಮಾಡಿದ್ದು, ಅದನ್ನು ನಿರಾಕರಿಸಿದ ಕಾರಣ ಶಿರಳಗಿ ಗ್ರಾ ಪಂ ಪಿಡಿಓ ರಾಜೇಶ ನಾಯ್ಕ ಅವರ ಮೇಲೆ ಹಲ್ಲೆ ನಡೆದಿದೆ. ಆರೋಪಿ ವಿರುದ್ಧ ಕೂಡಲೇ ಕಠಿಣ ಕ್ರಮ ಜರುಗಿಸಬೇಕು’ ಎಂದು ಉತ್ತರ ಕನ್ನಡ ಜಿಲ್ಲಾ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಗಿರೀಶ್ ನಾಯಕ ಅವರು ಆಗ್ರಹಿಸಿದ್ದಾರೆ.
ಈ ಬಗ್ಗೆ ಅವರು ಪೊಲೀಸ್ ಅಧೀಕ್ಷಕರು, ಜಿ ಪಂ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. `ಪಿಡಿಓ ರಾಜೇಶ ನಾಯ್ಕ ಅವರ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಆರೋಪಿ ವಿರುದ್ಧ ಸೂಕ್ತ ರೀತಿಯಲ್ಲಿ ಕ್ರಮ ಜರುಗಿಸಲಾಗುತ್ತದೆ’ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಲೀಶ್ ಶಶಿ ಅವರು ಭರವಸೆ ನೀಡಿದ್ದಾರೆ. `ಸರ್ಕಾರಿ ಅಧಿಕಾರಿ ಮೇಲೆ ನಡೆದ ದಾಳಿಯ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧೀಕ್ಷಕರ ಬಳಿಯೂ ಚರ್ಚಿಸುವುದಾಗಿ ಅವರು ಹೇಳಿದ್ದಾರೆ. ಪಿಡಿಓಗಳು ಅನುಭವಿಸುವ ಇನ್ನಿತರ ಸಮಸ್ಯೆಗಳ ಬಗ್ಗೆಯೂ ಗಿರೀಶ ನಾಯಕ ಅವರು ಮೇಲಧಿಕಾರಿಗಳ ಬಳಿ ಚರ್ಚಿಸಿದ್ದಾರೆ.
`ಶಿರಸಿ ತಾಲೂಕಿನ ಪಿಡಿಒಗಳನ್ನು ಜನಗಣತಿ ಕರ್ತವ್ಯಕ್ಕೆ ನಿಯೋಜನೆ ಮಾಡುವಲ್ಲಿ ವಿವಿಧ ಸಮಸ್ಯೆಯಾಗಿದೆ. ಕಾರವಾರ ತಾಲೂಕಿನ ಕಡವಾಡ ಗ್ರಾಮ ಪಂಚಾಯಿತಿ ಕಾರ್ಯದರ್ಶಿಯವರನ್ನು ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರದೆ ಬಿಎಲ್‌ಓ ಕೆಲಸಕ್ಕೆ ನಿಯೋಜಿಸಲಾಗಿದೆ. ಈ ಬಗ್ಗೆಯೂ ಗಮನಿಸಬೇಕು’ ಎಂದು ಸಂಘದವರು ಮನವಿ ಮಾಡಿದ್ದಾರೆ. ಇದಕ್ಕೆ ಜಿ ಪಂ ಸಿಇಓ ದಿಲೀಪ ಶಶಿ ಅವರು ಪೂರಕವಾಗಿ ಸ್ಪಂದಿಸಿದ್ದಾರೆ. `ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಎಲ್ಲಿಯೇ ಅನ್ಯಾಯವಾದರೂ ಅದನ್ನು ಸಂಘ ಸಹಿಸುವುದಿಲ್ಲ. ಉತ್ತರ ಕನ್ನಡ ಜಿಲ್ಲಾ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ನೌಕರರ ಹಿತರಕ್ಷಣೆಗೆ ಬದ್ಧವಾಗಿದೆ’ ಎಂದು ಈ ವೇಳೆ ಗಿರೀಶ ನಾಯಕ ಅವರು ಹೇಳಿದರು.