ಅಮಲಿನ ನಶೆಯಲ್ಲಿ ಅನುಮಾನಾಸ್ಪದವಾಗಿ ಅಲೆದಾಡುತ್ತಿದ್ದ ಮೂವರ ವಿರುದ್ಧ ಭಟ್ಕಳ ಪೊಲೀಸರು ಕಠಿಣ ಕ್ರಮ ಜರುಗಿಸಿದ್ದಾರೆ. ನಿಷೇಧಿತ ಮಾದಕ ವಸ್ತು ಸೇವಿಸಿ ಅನುಚಿತವಾಗಿ ವರ್ತಿಸುತ್ತಿದ್ದವರು ಕಾನೂನು ಕ್ರಮಕ್ಕೆ ಒಳಗಾಗಿದ್ದಾರೆ.
ಗುಳ್ಮೆ ಬೆಳಲಖಂಡ ನಿವಾಸಿ ಮಹಮ್ಮದ್ ಹುಸೇನ್ (56) ಸಾರ್ವಜನಿಕ ಸ್ಥಳದಲ್ಲಿ ಸಂಶಯಾಸ್ಪದವಾಗಿ ವರ್ತಿಸುತ್ತಿರುವುದನ್ನು ಗಮನಿಸಿದ ಭಟ್ಕಳ ಗ್ರಾಮೀಣ ಠಾಣಾ ಪೊಲೀಸರು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಈ ವೇಳೆ ಗಾಂಜಾ ಸೇವನೆ ಮಾಡಿರುವುದು ತಿಳಿದುಬಂದಿದೆ. ಬಳಿಕ ಅವರನ್ನು ಸರ್ಕಾರಿ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅದು ದೃಢಪಟ್ಟಿದೆ. ಗಾಂಧಿನಗರದ ಶಮ್ಸ್ ಶಾಲೆಯ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಆಜಾದ್ ನಗರ 7ನೇ ಕ್ರಾಸ್ ನಿವಾಸಿ ಮಲೀಕ ರೆಹಾನ (27) ಗಾಂಜಾ ಸೇವನೆ ಮಾಡುತ್ತಿದ್ದಾಗಲೇ ಪೊಲೀಸರು ಬಂಧಿಸಿದ್ದಾರೆ. ಸಂಶಯಾಸ್ಪದ ವರ್ತನೆಯ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದಾಗ ಗಾಂಜಾ ಸೇವನೆ ಮಾಡಿರುವುದು ಬೆಳಕಿಗೆ ಬಂದಿದೆ. ವೈದ್ಯಕೀಯ ಪರೀಕ್ಷೆಯಲ್ಲಿಯೂ ಇದು ದೃಢಪಟ್ಟಿದೆ.
ಭಟ್ಕಳದ ಅಲ್ ಬೇಕ್ ರೆಸ್ಟೋರೆಂಟಿನಲ್ಲಿ ಕೆಲಸ ಮಾಡುವ ಇರ್ಪಾನ್ ಅಜ್ವೀರ್ ಖಾನ್ ಸಹ ಗಾಂಜಾ ಸೇವಿಸಿ ಸಿಕ್ಕಿ ಬಿದ್ದಿದ್ದಾರೆ. ಭಟ್ಕಳ ಶಹರ ಠಾಣೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದು, ಅವರ ವೈದ್ಯಕೀಯ ವರದಿಯಲ್ಲಿಯೂ ಮಾದಕ ವ್ಯಸನ ಸೇವನೆ ದೃಢವಾಗಿದೆ. ಈ ಹಿನ್ನಲೆ ಈ ಮೂರು ಜನರ ವಿರುದ್ಧ ಭಟ್ಕಳ ಪೊಲೀಸರು ಕ್ರಮ ಜರುಗಿಸಿದ್ದಾರೆ.