ಹುಬ್ಬಳ್ಳಿ-ಅಂಕೋಲಾ ಮಾರ್ಗವಾಗಿ ಸಂಚರಿಸುತ್ತಿದ್ದ ಕಾರು ಯಲ್ಲಾಪುರದ ಅರಬೈಲ್ ಘಟ್ಟ ಪ್ರದೇಶದಲ್ಲಿ ಅಗ್ನಿಗೆ ಆಹುತಿಯಾಗಿದೆ. ಕಾರು ಓಡಿಸುತ್ತಿದ್ದ ವ್ಯಕ್ತಿಯೊಬ್ಬರು ಅಲ್ಲಿಯೇ ಸುಟ್ಟು ಕರಕಲಾಗಿದ್ದಾರೆ.
ಬುಧವಾರ ನಸುಕಿನಲ್ಲಿ ಈ ದುರಂತ ನಡೆದಿದೆ. ಚಲಿಸುತ್ತಿದ್ದ ಕಾರಿಗೆ ಏಕಾಏಕಿ ಬೆಂಕಿ ತಗುಲಿದ್ದು, ಈ ಅವಘಡಕ್ಕೆ ನಿಖರ ಕಾರಣ ಗೊತ್ತಾಗಿಲ್ಲ. ಕಾರು ವೇಗವಾಗಿ ಚಲಿಸುತ್ತಿದ್ದು ಹೆದ್ದಾರಿ ಅಂಚಿಗೆ ಹೋಗಿದೆ. ಕಾರು ಅಪಘಾತಕ್ಕೀಡಾಗಿದ್ದು, ಆ ಅಪಘಾತದ ವೇಳೆಯಲ್ಲಿಯೇ ಅಗ್ನಿ ಸ್ಪರ್ಶವಾಗಿರುವ ಅನುಮಾನವ್ಯಕ್ತವಾಗಿದೆ.
ಕಾರಿಗೆ ಏಕಾಏಕಿ ಬೆಂಕಿ ತಗುಲಿದ್ದರಿಂದ ಚಾಲಕನಿಗೆ ಹೊರ ಬರುವ ಅವಕಾಶ ಸಿಗಲಿಲ್ಲ. ಹೀಗಾಗಿ ಅದೇ ಕಾರಿನಲ್ಲಿ ಅವರು ಸಜೀವವಾಗಿ ದಹನವಾಗಿದ್ದಾರೆ. ವೆಕ್ಸೋವೇಗನ್ ಕಂಪನಿಗೆ ಸೇರಿದ ಕಾರು ಇದಾಗಿದ್ದು, ಕಾರಿನ ಮಾಲಕ ಹಾಗೂ ಸಾವನಪ್ಪಿದ ಚಾಲಕನ ಬಗ್ಗೆ ವಿಚಾರಣೆ ನಡೆಯುತ್ತಿದೆ. ಕಾರಿನ ಒಳಗಿದ್ದ ದೇಹ ಗುರುತು ಸಿಗದಷ್ಟರ ಮಟ್ಟಿಗೆ ಕರಕಲಾಗಿದೆ. ಕಾರಿನ ದಾಖಲೆಗಳು ಸಹ ಸುಟ್ಟಿವೆ.
ಕಾರು ಹೊತ್ತಿ ಉರಿಯುವುದನ್ನು ನೋಡಿದವರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಆಗಮಿಸುವುದರೊಳಗೆ ಕಾರು ಕರಕಲಾಗಿದೆ. ಅದಾದ ನಂತರ ಕಾರಿನ ಒಳಗೆ ವ್ಯಕ್ತಿಯೂ ದಹನವಾಗಿರುವುದು ಗಮನಕ್ಕೆ ಬಂದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.