ಸದ್ಯ ಕಾರವಾರದಲ್ಲಿ ವಾಸವಾಗಿರುವ ಶಿರಸಿಯ ಮೆಥ್ಯು ಫರ್ನಾಂಡಿಸ್ ಅವರಿಗೆ ಮೋಸವಾಗಿದೆ. ತಮ್ಮ ಬಳಿಯಿದ್ದ 21 ಲಕ್ಷ ರೂ ಹಣ ದುಪ್ಪಟ್ಟು ಮಾಡಿಕೊಳ್ಳುವ ಆಸೆಗೆ ಬಿದ್ದ ಅವರು ಆ ಎಲ್ಲಾ ಹಣವನ್ನು ಕಳೆದುಕೊಂಡಿದ್ದಾರೆ.
ಶಿರಸಿಯ ಶಿರಸಿ ಡಾನ್ ಬಾಸ್ಕೋ ಚರ್ಚ ಬಳಿಯ ಗಾಳಿ ಮಾಸ್ತಿ ದೇವಸ್ಥಾನ ಬಳಿ ಮೆಥ್ಯು ಡಿಯೋಗ ಫರ್ನಾಂಡಿಸ್ ಅವರು ವಾಸವಾಗಿದ್ದರು. ಉದ್ಯೋಗದ ನಿಮಿತ್ತ ಕಾರವಾರದ ಮಲ್ಲಾಪುರದ ಕೈಗಾ ಟೌನ್‌ಶಿಫ್ ಸೇರಿದ ಅವರು ನಿವೃತ್ತಿ ನಂತರವೂ ಅಲ್ಲಿಯೇ ಬದುಕು ಕಟ್ಟಿಕೊಂಡರು. ಅವರ ಬಳಿ 21 ಲಕ್ಷ ರೂ ಹಣವಿದ್ದು, ಆ ಹಣವನ್ನು ದುಪ್ಪಟ್ಟು ಮಾಡುವ ದುರಾಸೆಗೆ ಬಿದ್ದಿದ್ದರು. ಇದಕ್ಕಾಗಿ ಅವರು ಆನ್‌ಲೈನ್ ಟ್ರೇಡಿಂಗ್ ಮಾಡುವ ಸಾಹಸ ನಡೆಸಿದರು.
ವಾಟ್ಸಪ್ ಮೂಲಕ ಮೆಥ್ಯು ಫರ್ನಾಂಡಿಸ್ ಅವರನ್ನು ಸಂಪರ್ಕಿಸಿದ ಮೀನಾ ಜೋಶಿ ಹಾಗೂ ರಾಜೇಶ ಮುಡಿ ಅವರು ನಯವಾಗಿ ಮಾತನಾಡಿದರು. ತಾವು ಸೂಚಿಸಿದ ಕಡೆ ಹಣ ಹೂಡಿದರೆ ಹೆಚ್ಚಿನ ಲಾಭ ಕೊಡುವುದಾಗಿ ನಂಬಿಸಿದರು. ಟ್ರೆಡಿಂಗ್ ಮಾಹಿತಿ ಕೊಡುವ ವಾಟ್ಸಪ್ ಗುಂಪಿಗೆ ಮೆಥ್ಯು ಫರ್ನಾಂಡಿಸ್ ಅವರನ್ನು ಸೇರಿಸಿದರು. ಅದಾದ ನಂತರ ತಾವು ಹೇಳಿದ ಕಡೆ ಹಣ ಹೂಡಿಕೆ ಮಾಡುವಂತೆ ಸಲಹೆ ನೀಡಿದರು. ಅದರ ಪ್ರಕಾರ ಮೆಥ್ಯು ಫರ್ನಾಂಡಿಸ್ ಅವರು ತಮ್ಮಲ್ಲಿದ್ದ 21,76,100 ರೂಪಾಯಿಯನ್ನು ಟ್ರೇಡಿಂಗ್ ಅಪ್ಲಿಕೇಶನ್ ಮೂಲಕ ಜಮಾ ಮಾಡಿದರು.
ಆದರೆ, ಮೆಥ್ಯು ಫರ್ನಾಂಡಿಸ್ ಅವರಿಗೆ ಹೂಡಿಕೆ ಹಣವೂ ಸಿಗಲಿಲ್ಲ. ಲಾಭವೂ ದೊರೆಯಲಿಲ್ಲ. ಇದರಿಂದ ಕಂಗಾಲಾದ ಮೆಥ್ಯು ಫರ್ನಾಂಡಿಸ್ ಅವರು ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋದರು. ಆದ ಘಟನಾವಳಿಗಳ ಬಗ್ಗೆ ವಿವರಿಸಿ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಸೈಬರ್ ವಂಚನೆಯ ಬಗ್ಗೆ ಪೊಲೀಸರು ಅವರಿಗೆ ಅರಿವು ಮೂಡಿಸಿದರು.