ಜೊಯಿಡಾದಿಂದ ಕಾಣೆಯಾಗಿದ್ದ ಬಾಲಕಿಯೊಬ್ಬರು ತಿಂಗಳ ನಂತರ ಸಿಕ್ಕಿದ್ದು, ಆ ಬಾಲಕಿ ತಂದೆ ಜೊತೆ ಮನೆಗೆ ಹೋಗಲು ನಿರಾಕರಿಸಿದ ಕಾರಣ ಸಾಂತ್ವಾನ ಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ. ಒಂದು ತಿಂಗಳ ಕಾಲ ಆಕೆ ಎಲ್ಲಿದ್ದಳು? ಎನ್ನುವುದರ ಬಗ್ಗೆ ತನಿಖೆ ನಡೆಸುವಂತೆ ಬಾಲಕಿ ತಂದೆ ಪೊಲೀಸ್ ದೂರು ನೀಡಿದ್ದಾರೆ.
ಜೊಯಿಡಾದ ಇಳವಾ ಗಣೇಶಗುಡಿಯಲ್ಲಿ ತುಳಸಿದಾಸ ನಿಕ್ಕಂ ಅವರು ವಾಸವಾಗಿದ್ದಾರೆ. ಅವರ ಪುತ್ರಿ ಮನಿಷಾ (ಹೆಸರು ಬದಲಿಸಿದೆ) 10ನೇ ತರಗತಿಯವರೆಗೆ ಓದಿದ್ದು, ನಂತರ ಮನೆಯಲ್ಲಿಯೇ ಇದ್ದರು. ತಾಯಿಗೆ ಸಹಾಯ ಮಾಡಿಕೊಂಡಿದ್ದ ಮನಿಷಾ ಅವರು ಮಾರ್ಚ 14ರ ನಸುಕಿನ 3 ಗಂಟೆ ಅವಧಿಯಲ್ಲಿ ಕಾಣೆಯಾಗಿದ್ದರು. ಹಿಂದಿನ ದಿನ ರಾತ್ರಿ ಎಲ್ಲರೂ ಊಟ ಮಾಡಿ ಒಟ್ಟಿಗೆ ಮಲಗಿದ್ದು, ಮರುದಿನ ಬೆಳಗ್ಗೆ ಮಗಳು ಕಾಣೆಯಾಗಿದ್ದರಿಂದ ಕುಟುಂಬದವರೆಲ್ಲರೂ ಆತಂಕಕ್ಕೆ ಒಳಗಾಗಿದ್ದರು.
ಮಾರ್ಚ 14ರ ನಸುಕಿನಲ್ಲಿ ಮನಿಷಾ ಅವರು ತಂದೆಯನ್ನು ಎಬ್ಬಿಸಿ `ಕೆಲಸಕ್ಕೆ ಸಮಯವಾಯ್ತು. ಹೊರಡಿ’ ಎಂದಿದ್ದರು. `ಇನ್ನೂ ಬೆಳಗಾಗಿಲ್ಲ’ ಎಂದು ಹೇಳಿ ತುಳಸಿದಾಸ ನಿಕ್ಕಂ ಅವರು ಮತ್ತೆ ನಿದ್ರಿಸಿದ್ದರು. ಆ ಅವಧಿಯಲ್ಲಿಯೇ ಮನಿಷಾ ಅವರು ಮನೆಯಿಂದ ಹೊರಗೆ ಹೋಗಿದ್ದು, ಮರಳಿ ಬಂದಿರಲಿಲ್ಲ. ಪೊಲೀಸರು ಸಾಕಷ್ಟು ಹುಡುಕಾಟ ನಡೆಸಿದ್ದು, ಏಪ್ರಿಲ್ 14ರಂದು ಮನಿಷಾ ಅವರು ದಾಂಡೇಲಿಯಲ್ಲಿ ಪತ್ತೆಯಾದರು. ತುಳಸಿದಾಸ ನಿಕ್ಕಂ ಅವರು ಮಗಳನ್ನು ಕಂಡು ಖುಷಿಯಾಗಿದ್ದು, ಆಕೆಯಲ್ಲಿ ಮನೆಗೆ ಬರುವಂತೆ ಕೇಳಿಕೊಂಡರು.
ಆದರೆ, ಮನಿಷಾ ಅವರು ತಂದೆ ಜೊತೆ ಮನೆಗೆ ಬರಲು ಒಪ್ಪಲಿಲ್ಲ. ಹೀಗಾಗಿ ಪೊಲೀಸರು ಬಾಲಕಿಯನ್ನು ದಾಂಡೇಲಿ ಸಾಂತ್ವಾನ ಕೇಂದ್ರಕ್ಕೆ ಒಪ್ಪಿಸಿದರು. 17 ವರ್ಷದ ಮಗಳನ್ನು ದುಷ್ಕರ್ಮಿಗಳು ಪುಸಲಾಯಿಸಿ ಕರೆದೊಯ್ದ ಅನುಮಾನದ ಹಿನ್ನಲೆ ತುಳಸಿದಾಸ ನಿಕ್ಕಂ ಅವರು ಆ ಕಿಡಿಗೇಡಿಗಳ ಪತ್ತೆಗಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದರು. `ಒಂದು ತಿಂಗಳ ಕಾಲ ಮಗಳು ಯಾರ ಜೊತೆ ಇದ್ದರು? ಯಾರು ಆಕೆಯನ್ನು ಪುಸಲಾಯಿಸಿ ಕರೆದೊಯ್ದರು?’ ಎನ್ನುವ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿ ದೂರು ನೀಡಿದರು. ಪ್ರಕರಣ ದಾಖಲಿಸಿದ ಪೊಲೀಸರು ಆ ಬಗ್ಗೆ ವಿಚಾರಣೆ ಶುರು ಮಾಡಿದ್ದಾರೆ.