ಗ್ಯಾಸ್ ಸಿಲೆಂಡರ್ ಸಮಸ್ಯೆ ಹಿನ್ನಲೆ ಕೇಂದ್ರ ಸರ್ಕಾರವೂ ರಾಜ್ಯ ಸರ್ಕಾರಕ್ಕೆ ಹೆಚ್ಚುವರಿ ಸೀಮೆಎಣ್ಣೆ ಹಂಚಿಕೆ ಮಾಡಿದ್ದು, ಉತ್ತರ ಕನ್ನಡ ಜಿಲ್ಲೆಯ ಒಂದು ಲಕ್ಷಕ್ಕೂ ಅಧಿಕ ಜನರಿಗೆ ಮೂರು ಲೀಟರ್ ಸೀಮೆಎಣ್ಣೆ ಸಿಗಲಿದೆ.
ಮಾರ್ಚ ತಿಂಗಳ ಅವಧಿಯಲ್ಲಿಯೂ ಲಕ್ಷಾಂತರ ಜನರಿಗೆ ಸೀಮೆಎಣ್ಣೆ ವಿತರಿಸಲಾಗಿದ್ದು, ಏಪ್ರಿಲ್ ತಿಂಗಳಿನಲ್ಲಿಯೂ ಅದನ್ನು ಮುಂದುವರೆಸಲು ಸರ್ಕಾರ ನಿರ್ಧರಿಸಿದೆ. ಹೀಗಾಗಿ ಏಪ್ರಿಲ್ ತಿಂಗಳ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ 189725 ಕುಟುಂಬಗಳಿಗೆ ಈ ಸೀಮೆಎಣ್ಣೆ ಭಾಗ್ಯ ಸಿಗಲಿದೆ. ಪ್ರತಿ ಲೀಟರಿಗೆ 35 ರೂಪಾಯಿ ಹಣ ಪಾವತಿಸಿ ಅರ್ಹರು ಸೀಮೆಎಣ್ಣೆಪಡೆಯಯಬಹುದಾಗಿದ್ದು, ನ್ಯಾಯ ಬೆಲೆ ಅಂಗಡಿಯವರು ಸರಿಯಾಗಿ ಸೀಮೆಎಣ್ಣೆ ನೀಡದೇ ಇದ್ದರೂ ದೂರು ನೀಡುವಂತೆಯೂ ಅಧಿಕಾರಿಗಳು ಹೇಳಿದ್ದಾರೆ.
ಯುದ್ಧ ಸನ್ನಿವೇಶದ ಕಾರಣ ಗ್ರಾಮೀಣ ಭಾಗದ ಜನ 45 ದಿನದ ನಂತರ ಗ್ಯಾಸ್ ಸಿಲೆಂಡರ್ ಬುಕ್ ಮಾಡುವ ಪರಿಸ್ಥಿತಿ ಬಂದಿದೆ. ಜನ ಸಮಸ್ಯೆಗೆ ಸಿಲುಕಿರುವುದನ್ನು ಅರಿತ ಸರ್ಕಾರ ತಾತ್ಕಾಲಿಕವಾಗಿ ಸಮಸ್ಯೆ ದೂರ ಮಾಡುವುದಕ್ಕಾಗಿ ಸೀಮೆಎಣ್ಣೆಯ ಮೊರೆ ಹೊಗಿದೆ. ಈ ಮೊದಲು ಅರ್ಹರಿಗೆ ಅವರವರ ಅಗತ್ಯಕ್ಕೆ ಅನುಗುಣವಾಗಿ ಒಂದು ಅಥವಾ ಎರಡು ಲೀಟರ್ ಸೀಮೆಎಣ್ಣೆ ನೀಡಲಾಗುತ್ತಿತ್ತು. ಸದ್ಯ ಆ ಎಲ್ಲಾ ಅರ್ಹರಿಗೂ ಮೂರು ಲೀಟರ್ ಸೀಮೆಎಣ್ಣೆ ನೀಡಲಾಗುತ್ತಿದೆ. 639 ಅನಿಲರಹಿತ ಪಡಿತರ ಚೀಟಿದಾರರಿಗೂ ಈ ಮೂರು ಲೀಟರ್ ಸೀಮೆಎಣ್ಣೆ ಸಿಗಲಿದೆ.
ಸೀಮೆಎಣ್ಣೆ ವಿತರಣೆಯಲ್ಲಿ ಲೋಪ ನಡೆದರೆ ಆಹಾರ ಶಿರಸ್ತೇದಾರ್ ಅಥವಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರಿಗೆ ದೂರು ನೀಡುವಂತೆ ಅಧಿಕಾರಿಗಳು ಹೇಳಿದ್ದಾರೆ.