ಹೊನ್ನಾವರದ ನಗರಬಸ್ತಿಕೇರಿಯ ಜಗದೀಶ ನಾಯ್ಕ ಅವರು ಓಡಿಸುತ್ತಿದ್ದ ಬೈಕ್ ಅಪಘಾತಕ್ಕೀಡಾಗಿದೆ. ಈ ಅಪಘಾತದಲ್ಲಿ ಜಗದೀಶ ನಾಯ್ಕ ಅವರ ಜೊತೆಗಿದ್ದ ಸಂತೋಷ ಅಂಬಿಗ ಅವರು ಸಾವನಪ್ಪಿದ್ದಾರೆ.
ಹೊನ್ನಾವರದ ನಗರಬಸ್ತಿಕೇರಿಯಲ್ಲಿ ಜಗದೀಶ ಗೋಪಾಲಕೃಷ್ಣ ನಾಯ್ಕ (36) ಅವರು ವಾಸವಾಗಿದ್ದರು. ಚಾಲಕರಾಗಿ ಅವರು ಜೀವನ ನಡೆಸುತ್ತಿದ್ದರು. ಅವರು ಸದಾ ವೇಗವಾಗಿ ಬೈಕ್ ಓಡಿಸುತ್ತಿದ್ದು, ಏಪ್ರಿಲ್ 17ರ ರಾತ್ರಿ ಅವರು ವೇಗವಾಗಿ ಬೈಕ್ ಓಡಿಸಿದ ಕಾರಣ ಆ ಬೈಕಿನಲ್ಲಿದ್ದ ಸಹ ಸವಾರ ಸಂತೋಷ ಅಂಬಿಗ ಅವರು ಸಾವನಪ್ಪಿದರು.ಸಂತೋಷ ಅಂಬಿಗ ಅವರನ್ನು ಬದುಕಿಸಿಕೊಳ್ಳುವುದಕ್ಕಾಗಿ ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ನಂತರ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ಕಳುಹಿಸಿದರೂ ಪ್ರಯೋಜನ ಆಗಲಿಲ್ಲ.
ಸಂತೋಷ ಸಣ್ಣು ಅಂಬಿಗ (38) ಅವರು ಹೊನ್ನಾವರ ನಗರಬಸ್ತಿಕೇರಿಯ ಮಠದಕೇರಿಯವರಾಗಿದ್ದರು. ಅಲ್ಲಿ ಅವರು ಮೀನುಗಾರಿಕೆ ನಡೆಸಿ ಬದುಕು ಕಟ್ಟಿಕೊಂಡಿದ್ದರು. ಜಗದೀಶ್ ನಾಯ್ಕ ಅವರು ವೇಗವಾಗಿ ಬೈಕ್ ಓಡಿಸುವಾಗ ಅವರು ಹಿಂದೆ ಕುಳಿತಿದ್ದು, ಗೇರುಸೊಪ್ಪದ ಮನೋಜ ಶ್ರೀಕಾರ ನಾಟಿಕರ್ ಅವರ ಮನೆ ಮುಂದೆ ಆ ಬೈಕ್ ಸ್ಕಿಡ್ ಆಯಿತು. ಪರಿಣಾಮ ಜಗದೀಶ ನಾಯ್ಕ ಹಾಗೂ ಸಂತೋಷ ಅಂಬಿಗ ಇಬ್ಬರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡರು. ಇಬ್ಬರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆದಿದ್ದು, ಸದ್ಯ ಜಗದೀಶ ನಾಯ್ಕ ಅವರು ಚಿಕಿತ್ಸೆಪಡೆಯುತ್ತಿದ್ದಾರೆ. ಆಸ್ಪತ್ರೆಯವರು ಸಂತೋಷ ಅಂಬಿಗ ಅವರ ಶವ ಪರೀಕ್ಷೆ ನಡೆಸಿ, ಶವವನ್ನು ಕುಟುಂಬಕ್ಕೆ ಮರಳಿಸಿದ್ದಾರೆ. ನಗರಬಸ್ತಿಕೇರಿಯ ನಾರಾಯಣ ಸಣ್ಣಕೋಸ ಅಂಬಿಗ ಅವರು ನೀಡಿದ ಮಾಹಿತಿ ಮೇರೆಗೆ ಹೊನ್ನಾವರ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.