ಕಾರವಾರ ಆರ್ ಟಿ ಓ ಕಚೇರಿಯಲ್ಲಿನ ಕಡತ ಕಳ್ಳತನ ಪ್ರಕರಣದ ಕುರಿತು ದೂರು ಸ್ವೀಕರಿಸಿದ ಬೆಳಗಾವಿ ವಿಭಾಗದ ಜಂಟಿ ಸಾರಿಗೆ ಆಯುಕ್ತರು ಈ ಬಗ್ಗೆ ಸಮಗ್ರ ವರದಿ ನೀಡುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಸೂಚಿಸಿದ್ದಾರೆ. ಕಡತ ಕಣ್ಮರೆಯ ಬಗ್ಗೆ ಲಾರಿ ಮಾಲಕರ ಸಂಘದ ಅಧ್ಯಕ್ಷ ಮಾಧವ ನಾಯಕ ನೀಡಿದ ದೂರಿಗೆ ಹಿರಿಯ ಅಧಿಕಾರಿಗಳು ಸ್ಪಂದಿಸಿ ಈ ಸೂಚನೆ ರವಾನಿಸಿದ್ದಾರೆ.
`ಕಾರವಾರದ ಆರ್ ಟಿ ಓ ಕಚೇರಿಯಲ್ಲಿನ ಕಡತಗಳು ಕಾಣೆಯಾಗಿವೆ. ಮುಖ್ಯ ದಾಖಲೆಗಳು ಅಲ್ಲಿನ ಅಧಿಕಾರಿಗಳ ಕೈಗೆ ಸಿಗುತ್ತಿಲ್ಲ. ಇದರಿಂದ ಜನ ಸಮಸ್ಯೆ ಅನುಭವಿಸುತ್ತಿದ್ದಾರೆ’ ಎಂದು ಮಾಧವ ನಾಯಕ ಅವರು ದೂರಿದ್ದರು. `ಕಡತ ಕಾಣೆಯಾಗಿದ್ದರೂ ಅಧಿಕಾರಿಗಳು ದೂರು ದಾಖಲಿಸದೇ ಇರುವುದು ಇನ್ನಷ್ಟು ಅನುಮಾನ ಹುಟ್ಟಿಸಿದೆ. ಈ ಬಗ್ಗೆ ಪ್ರಶ್ನಿಸಿದರೂ ಅಧಿಕಾರಿಗಳು ಸರಿಯಾಗಿ ಮಾತನಾಡುತ್ತಿಲ್ಲ. ಸಮಸ್ಯೆಗೆ ಸ್ಪಂದಿಸುವ ಕೆಲಸವನ್ನು ಮಾಡುತ್ತಿಲ್ಲ’ ಎಂದವರು ಅಸಮಧಾನವ್ಯಕ್ತಪಡಿಸಿದ್ದರು.
ಅದಾದ ನಂತರ ಕಡತ ಕಾಣೆ ವಿಷಯದ ಬಗ್ಗೆ ಚರ್ಚಿಸಲು ಸಾರಿಗೆ ಇಲಾಖೆಗೆ ಮಾಧವ ನಾಯಕ ಅವರು ಭೇಟಿ ನೀಡಿ ಪ್ರಶ್ನಿಸಿದ್ದು, ಸರಿಯಾದ ಉತ್ತರ ಸಿಗದ ಕಾರಣ ದೂರು ನೀಡಿದ್ದರು. ಈ ನಡುವೆ ಎಲ್ಲಾ ಕಡತ ಹುಡುಕಿಸುವುದಾಗಿ ಆರ್ ಟಿ ಓ ಜಾನ್ ಮಿಸ್ಕಿನ್ ಪ್ರತಿಕ್ರಿಯಿಸಿದ್ದು, ಅವರು ನೀಡಿದ ಭರವಸೆ ಈಡೇರಿಸಿರಲಿಲ್ಲ. ಹೀಗಾಗಿ ಆ ದೂರು ಸ್ವೀಕರಿಸಿದ ಬೆಳಗಾವಿ ವಿಭಾಗದ ಜಂಟಿ ಸಾರಿಗೆ ಆಯುಕ್ತರು ಸಮಗ್ರ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ವಿವಿಧ ಸೇವೆಗಳಿಗೆ ಅರ್ಜಿ ಸಲ್ಲಿಸಿದವರ ಅರ್ಜಿ ಜೊತೆ ಅವರ ವೈಯಕ್ತಿಕ ಕಡತಗಳು ಕಾಣೆಯಾಗಿದ್ದರಿಂದ ಅದರ ದುರುಪಯೋಗದ ಅನುಮಾನವೂ ಜನರನ್ನು ಕಾಡುತ್ತಿದೆ. ತನಿಖಾ ವರದಿ ಸರಿಯಾಗಿ ಬಂದರೆ ಸತ್ಯ ಹೊರಬರುವ ಸಾಧ್ಯತೆ ಹೆಚ್ಚಿದೆ.