ಅಂಕೋಲಾದ ಬಳಿ ಪೆಟ್ರೋಲಿಯಂ ಉತ್ಪನ್ನ ಸಾಗಿಸುತ್ತಿದ್ದ ಟ್ಯಾಂಕರ್ ಸ್ಪೋಟದಿಂದ ಚಾಲಕ ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದು, ಆ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿಲ್ಲ. ಸ್ಪೋಟದ ವೇಳೆ ಬೆಂಕಿಯಿoದ ಹಾರಿ ತಪ್ಪಿಸಿಕೊಂಡಿದ್ದ ಚಿತ್ರದುರ್ಗದ ಚಾಲಕ ಮುರುಗೇಂದ್ರಯ್ಯ ಅವರು ಮಂಗಳೂರಿನ ಕೆ ಎಸ್ ಹೆಗಡೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
2026ರ ಏಪ್ರಿಲ್ 16ರಂದು ಅಂಕೋಲಾದ ಅಗಸೂರು ಸಮೀಪದ ಕಂಚಿನಬಾಗಿಲು ಹೆದ್ದಾರಿಯಲ್ಲಿ ಪೆಟ್ರೋಲಿಯಂ ಉತ್ಪನ್ನ ಸಾಗಿಸುತ್ತಿದ್ದ ಟ್ಯಾಂಕರ್ ಅಪಘಾತಕ್ಕೀಡಾಗಿತ್ತು. ಅಪಘಾತದ ಪರಿಣಾಮ ಟ್ಯಾಂಕರ್ ಸ್ಪೋಟವಾಗಿ ಭಾರೀ ಪ್ರಮಾಣದಲ್ಲಿ ಅಗ್ನಿ ಅನಾಹುತ ಸಂಭವಿಸಿತ್ತು. ಈ ಅನಾಹುತದಿಂದ ಚಿತ್ರದುರ್ಗದ ಚಾಲಕ ಮುರುಗೇಂದ್ರಯ್ಯ ಅವರು ಪಾರಾಗಿ ಬಂದಿದ್ದರು. ಆದರೆ, ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದ ಅವರನ್ನು ಅಂಕೋಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.
ಅದಾದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕೆ ಎಸ್ ಹೆಗಡೆ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಬೆಂಕಿ ಬಿದ್ದ ಸ್ಥಳಕ್ಕೆ ದೌಡಾಯಿಸಿದ್ದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಆರಿಸುವ ಪ್ರಯತ್ನ ಮಾಡಿದ್ದರು. ಪ್ರಾಥಮಿಕ ಮಾಹಿತಿ ಪ್ರಕಾರ ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಆ ಟ್ಯಾಂಕರ್ ಅಪಘಾತಕ್ಕೀಡಾಗಿರುವುದು ಗೊತ್ತಾಗಿದ್ದು, ಚಾಲಕನನ್ನು ಆರೋಪಿಯನ್ನಾಗಿಸಿ ಪ್ರಕರಣ ದಾಖಲಿಸಲಾಗಿತ್ತು. ಹೆಬ್ಬುಳದ ಸಂತೋಷ ನಾನಾ ತಾಳೆಕರ್ ಅವರು ಪ್ರತ್ಯಕ್ಷದರ್ಶಿಯಾಗಿ ಪೊಲೀಸರಿಗೆ ವರದಿ ಒಪ್ಪಿಸಿದ್ದರು.
ಐದು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ಚಾಲಕ ಮುರುಗೇಂದ್ರಯ್ಯ ಅವರು ಈ ದಿನ ಸಾವನಪ್ಪಿದರು. ಕೆ ಎಸ್ ಹೆಗಡೆ ಆಸ್ಪತ್ರೆಯವರು ಈ ಬಗ್ಗೆ ಅಂಕೋಲಾ ಪೊಲೀಸರಿಗೆ ಮಾಹಿತಿ ನೀಡಿದರು.