500ರೂಪಾಯಿ ಕೊಡದ ಕಾರಣ ಕೆಲಸ ಕೊಟ್ಟವರನ್ನೇ ಕೊಂದ ಕಾರ್ಮಿಕನಿಗೆ ಶಿರಸಿ ನ್ಯಾಯಾಲಯ ಜೀವಾವಧಿ ಜೈಲು ಶಿಕ್ಷೆ ವಿಧಿಸಿದೆ.
ಶಿರಸಿಯ ಸೋಂದಾ ಬಳಿಯ ಮಠದಕೇರಿ ಸಮೀಪದ ಕಮಟಗೇರಿಯಲ್ಲಿ ರವೀಶ ಚೆನ್ನಯ್ಯ ಅವರು ವಾಸವಾಗಿದ್ದರು. ರವೀಶ ಚೆನ್ನಯ್ಯ ಅವರು ಶೇರುಗಾರರಾಗಿದ್ದು, ವಿವಿಧ ತೋಟದ ಮಾಲಕರಿಂದ ಕೆಲಸಗಳನ್ನು ಗುತ್ತಿಗೆಪಡೆಯುತ್ತಿದ್ದರು. ನಂತರ ಕೂಲಿ ಕಾರ್ಮಿಕರನ್ನು ನೇಮಿಸಿ ಆ ಕೆಲಸ ಮಾಡಿಸುತ್ತಿದ್ದರು. ರವೀಶ ಚೆನ್ನಯ್ಯ ಅವರ ಬಳಿ ಅದೇ ಭಾಗದ ಮಂಜುನಾಥ ಚೆನ್ನಯ್ಯ ಅವರು ಸಹ ಕೂಲಿ ಕೆಲಸ ಮಾಡಿಕೊಂಡಿದ್ದರು. ಮಂಜುನಾಥ ಚೆನ್ನಯ್ಯ ಅವರು ಪದೇ ಪದೇ ದುಡ್ಡು ಕೇಳುತ್ತಿದ್ದು, ರವೀಶ ಚೆನ್ನಯ್ಯ ಅವರು ಸಮಾಧಾನ ಮಾಡಿ ಕಳುಹಿಸುತ್ತಿದ್ದರು. ಅದಾಗಿಯೂ, ರವೀಶ ಚೆನ್ನಯ್ಯ ಅವರು ಮಂಜುನಾಥ ಚೆನ್ನಯ್ಯ ಅವರಿಗೆ 500ರೂ ಕೊಡಬೇಕಿತ್ತು.
2025ರ ಅಗಸ್ಟ 8ರಂದು 500ರೂ ಕೊಡುವಂತೆ ಮಂಜುನಾಥ ಚೆನ್ನಯ್ಯ ಅವರು ಗಲಾಟೆ ಮಾಡಿದ್ದರು. `ಎರಡು ದಿನದ ನಂತರ 500ರೂ ಕೊಡುವೆ’ ಎಂದು ರವೀಶ ಚೆನ್ನಯ್ಯ ಅವರು ಆ ದಿನ ಸಮಾಧಾನ ಮಾಡಿ ಕಳುಹಿಸಿದ್ದರು. ಅಗಸ್ಟ 18ರಂದು ರವೀಶ ಚೆನ್ನಯ್ಯ ಅವರು ಮಂಜುನಾಥ ಚೆನ್ನಯ್ಯ ಅವರ ಮನೆಗೆ ಹೋಗಿ, `ನಾಳೆ ಕೆಲಸಕ್ಕೆ ಬಾ’ ಎಂದು ಕರೆದಿದ್ದರು. ಆಗಲೂ ಮಂಜುನಾಥ ಚೆನ್ನಯ್ಯ ಅವರು 500ರೂ ಹಣ ಕೇಳಿದ್ದು, `ಮೂರು ದಿನದಲ್ಲಿ ಕೊಡುವೆ’ ಎಂದು ಭರವಸೆ ನೀಡಿದ್ದರು. ಹಣ ಕೊಡದ ಕಾರಣ ರವೀಶ ಚೆನ್ನಯ್ಯ ಅವರ ಮೇಲೆ ಮಂಜುನಾಥ ಚೆನ್ನಯ್ಯ ಅವರು ಸಿಟ್ಟು ಮಾಡಿಕೊಂಡಿದ್ದರು. ಅದೇ ಸಿಟ್ಟಿನಲ್ಲಿ ಆ ದಿನ ರಾತ್ರಿ ಕಬ್ಬಿಣದ ಕೊಡಲಿ ಹಿಡಿದ ಮಂಜುನಾಥ ಚೆನ್ನಯ್ಯ ಅವರು ರವೀಶ ತಲೆಗೆ ಹೊಡೆದರು. ಆ ಏಟಿಗೆ ರವೀಶ ಚೆನ್ನಯ್ಯ ಅವರು ಅಲ್ಲಿಯೇ ಸಾವನಪ್ಪಿದರು.
ಮಾವನನನ್ನೂ ಕೊಂದಿದ್ದ ಮಂಜುನಾಥ!
ಮoಜುನಾಥ ಚೆನ್ನಯ್ಯ ಅವರಿಗೆ ಈ ಕೊಲೆ ಮೊದಲನೆಯದ್ದಾಗಿರಲಿಲ್ಲ. 2002ರಲ್ಲಿ ಸಹ ಮಂಜುನಾಥ ಚೆನ್ನಯ್ಯ ಅವರು ಒಂದು ಕೊಲೆ ಮಾಡಿದ್ದರು. ಹೆಣ್ಣು ಕೊಟ್ಟ ಮಾವನನ್ನು ಸಹ ಕೊಂದಿದ್ದ ಮಂಜುನಾಥ ಚೆನ್ನಯ್ಯ ಅವರು ಈ ಮೊದಲು 14 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದರು. ಶಿಕ್ಷೆ ಮುಗಿಸಿ ಊರಿಗೆ ಮರಳಿದ್ದ ಅವರು ರವೀಶ ಚೆನ್ನಯ್ಯ ಅವರಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, 500ರೂ ಕೊಡದ ಕಾರಣ ರವೀಶ ಚೆನ್ನಯ್ಯ ಅವರ ತಲೆ ಒಡೆದು ಜೈಲು ಸೇರಿದ್ದರು.
ರವೀಶ ಚೆನ್ನಯ್ಯ ಅವರ ಪತ್ನಿ ಚೇತನಾ ಚೆನ್ನಯ್ಯ ಅವರು ನೀಡಿದ ದೂರಿನ ಅನ್ವಯ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದರು. ಆಗಿನ ಪಿಐ ಶಶಿಕಾಂತ ವರ್ಮಾ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದರು. ಪೊಲೀಸ್ ಸಿಬ್ಬಂದಿ ಶಂಕರಾಚಾರ್ಯ ಅವರು ಸಾಕ್ಷಿದಾರರನ್ನು ಹಾಜರುಪಡಿಸಿದರು. ಸರ್ಕಾರಿ ಅಭಿಯೋಜಕ ರಾಜೇಶ ಮಳಗಿಕರ್ ಅವರು ವಾದ ಮಂಡಿಸಿದ್ದು, ಆರೋಪಿ ಮಂಜುನಾಥ ಚೆನ್ನಯ್ಯ ಅವರ ಕ್ರೂರ ಸ್ವಭಾವವನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿದರು. ಮಾವನನ್ನು ಕೊಂದು ಜೈಲು ಸೇರಿದ ಘಟನೆಯನ್ನು ನೆನಪಿಸಿದರು. ಜೊತೆಗೆ 500ರೂಪಾಯಿ ಹಣಕ್ಕಾಗಿ ಕೊಲೆ ಮಾಡುವ ಮಟ್ಟಕ್ಕೆ ಹೋದ ಕಾರ್ಮಿಕನಿಗೆ ಕಠಿಣ ಶಿಕ್ಷೆ ವಿಧಿಸಿಬೇಕು ಎಂದವರು ಕೇಳಿಕೊಂಡರು. ಪ್ರಕರಣದ ಸಮಗ್ರ ವಿಚಾರಣೆ ನಡೆಸಿದ ನ್ಯಾಯಾಲಯ ವಿವಿಧ ಸಾಕ್ಷಿಗಳನ್ನು ಪರಿಗಣಿಸಿತು.
ಆರೋಪಿ ಮಂಜುನಾಥ ಚೆನ್ನಯ್ಯ ಅವರ ಮೇಲಿದ್ದ ಆರೋಪ ಸಾಭೀತಾದ ಹಿನ್ನಲೆ ನ್ಯಾಯಾಧೀಶ ಕಿರಣ ಕಿಣಿ ಅವರು ಬುಧವಾರ ತಮ್ಮ ಆದೇಶ ಪ್ರಕಟಿಸಿದರು. ಮಂಜುನಾಥ ಚೆನ್ನಯ್ಯ ಅವರನ್ನು ಜೀವಾವಧಿ ಶಿಕ್ಷೆಗೆ ಒಳಪಡಿಸಿದರು. ಜೊತೆಗೆ 25 ಸಾವಿರ ರೂ ದಂಡವನ್ನು ಪಾವತಿಸುವಂತೆ ಆದೇಶಿಸಿದರು. ಇದರೊಂದಿಗೆ `ಸಂತ್ರಸ್ತೆ ಚೇತನಾ ಚೆನ್ನಯ್ಯ ಅವರಿಗೂ ಮಂಜುನಾಥ ಚೆನ್ನಯ್ಯ ಅವರು 50 ಸಾವಿರ ರೂ ಪರಿಹಾರ ಕೊಡಬೇಕು. ಚೇತನಾ ಚೆನ್ನಯ್ಯ ಅವರು ಕಾನೂನು ಸೇವಾ ಪ್ರಾಧಿಕಾರದಿಂದಲೂ ಹೆಚ್ಚಿನ ಪರಿಹಾರಪಡೆಯಲು ಅರ್ಹರು’ ಎಂದು ತೀರ್ಪು ನೀಡಿದರು.