ಕಡಿಮೆ ಸಮಯದಲ್ಲಿ ಹೆಚ್ಚು ಹಣ ಮಾಡಬೇಕು ಎಂದು ಶೇರು ಮಾರುಕಟ್ಟೆ ಪ್ರವೇಶಿಸಿದ ಸಿದ್ದಾಪುರದ ಹರ್ಷವರ್ಧನ ಪಂಡಿತ ಅವರು ಅಲ್ಲಿ ಹೂಡಿಕೆ ಮಾಡಿದ ಹಣವನ್ನು ಕಳೆದುಕೊಂಡಿದ್ದಾರೆ. ಹಣ ಕಳೆದುಕೊಂಡ ನೋವಿನಲ್ಲಿಯೇ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸಿದ್ದಾಪುರ ರಾಜಮಾರ್ಗದಲ್ಲಿ ಹರ್ಷವರ್ಧನ ಪಂಡಿತ (22) ಅವರು ವಾಸವಾಗಿದ್ದರು. ಕಾಲೇಜು ವಿದ್ಯಾರ್ಥಿಯಾಗಿದ್ದ ಅವರು ಬಹುಬೇಗ ದುಡ್ಡು ಮಾಡಬೇಕು ಎಂಬ ಕನಸು ಕಂಡಿದ್ದರು. ಅದಕ್ಕಾಗಿ ಅವರು ಶೇರು ಮಾರುಕಟ್ಟೆಯ ಮಾರ್ಗ ಆರಿಸಿಕೊಂಡಿದ್ದರು. ಮೊಬೈಲಿನಲ್ಲಿ ಸ್ಟಾಕ್ ಎಕ್ಸಚೈಂಚ್ ಟ್ರೇಡಿಂಗ್ ಅಪ್ಲಿಕೇಶನ್ ಹಾಕಿದ ಹರ್ಷವಧನ ಅವರು ಅಲ್ಲಿ ಹಣ ಹೂಡಿಕೆ ಮಾಡಿದ್ದರು. ಆದರೆ, ಹೂಡಿಕೆ ಮಾಡಿದ ಹಣವನ್ನು ಸಹ ಮರಳಿಪಡೆಯಲು ಅವರಿಂದ ಸಾಧ್ಯವಾಗಲಿಲ್ಲ.
ಹಣ ಕಳೆದುಕೊಂಡ ನೋವಿನಲ್ಲಿದ್ದ ಅವರು ಆ ನೋವು ಮರೆಯುವುದಕ್ಕಾಗಿ ಸರಾಯಿ ಸೇವನೆ ಶುರು ಮಾಡಿದರು. ಸರಾಯಿ ಸೇವನೆ ವಿಪರೀತವಾದ ಪರಿಣಾಮ ಹರ್ಷವರ್ಧನ ಪಂಡಿತ ಅವರ ಆರೋಗ್ಯ ಹದಗೆಟ್ಟಿತು. ಮತ್ತಷ್ಟು ಹಣವೂ ಖಾಲಿಯಾಯಿತು. ಇದರಿಂದ ಇನ್ನಷ್ಟು ಕುಗ್ಗಿದ ಹರ್ಷವರ್ಧನ ಪಂಡಿತ ಅವರು ದುಡುಕು ನಿರ್ಧಾರಕ್ಕೆ ಮುಂದಾದರು. ಏಪ್ರಿಲ್ 22ರ ನಸುಕಿನಲ್ಲಿ ಮನೆಯ ಕೋಣೆಯಲ್ಲಿದ್ದ ಅವರು ಅಲ್ಲಿದ್ದ ಫ್ಯಾನಿಗೆ ಟವೆಲ್ ಸುತ್ತಿದರು. ಆ ಟವೆಲಿಗೆ ಕೊರಳನ್ನು ಒಡ್ಡಿ ನೇಣು ಹಾಕಿಕೊಂಡರು.
ಬೆಳಗ್ಗೆ ಎದ್ದ ತಕ್ಷಣ ಮಗನ ಶವ ನೋಡಿದ ವೈದ್ಯ ಚಂದ್ರಶೇಖರ ಪಂಡಿತ್ ಅವರು ಆಘಾತಕ್ಕೆ ಒಳಗಾದರು. ಮಗನ ದುಡುಕು ನಿರ್ಧಾರ ಹಾಗೂ ಅದಕ್ಕೆ ಶೇರು ಮಾರುಕಟ್ಟೆಯ ವ್ಯವಹಾರ ಕಾರಣವಾದ ಬಗ್ಗೆ ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಿದರು.