`ಸಂಘಟನಾತ್ಮಕ ಅರಣ್ಯ, ಪರಿಸರ ಸಂರಕ್ಷಣಾ ಕಾರ್ಯಕ್ಕೆ ಹೆಚ್ಚಿನ ಸಿಎಸ್‌ಆರ್ ಅನುದಾನ ವಿನಿಯೋಗವಾಗಲಿ’ ಎಂದು ಕೆನರಾ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್ ಅವರು ಹೇಳಿದ್ದಾರೆ. ಶಿರಸಿಯ ಸುಪ್ರಿಯಾ ಇಂಟರ್‌ನ್ಯಾಷನಲ್ ಹೊಟೇಲ್‌ನಲ್ಲಿ ಪ್ರತಿಷ್ಠಿತ ಸ್ಕೊಡ್‌ವೆಸ್ ಸಂಸ್ಥೆ ಸಂಘಟಿಸಿದ್ದ ರಾಜ್ಯಮಟ್ಟದ ಭಾಗೀದಾರರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು `ಪಶ್ಚಿಮ ಘಟ್ಟಗಳು ಹಾಗೂ ಈಶಾನ್ಯ ರಾಜ್ಯಗಳ ಅರಣ್ಯ ಪ್ರದೇಶಗಳು ಇಡೀ ದೇಶದ ನೈಸರ್ಗಿಕ ವಾತಾವರಣವನ್ನು ನಿಯಂತ್ರಿಸುತ್ತಿರುವುದರಿoದ ಇವುಗಳ ರಕ್ಷಣೆ ಎಲ್ಲರ ಜವಾಬ್ದಾರಿಯಾಗಬೇಕಿದೆ’ ಎಂದು ಕರೆ ನೀಡಿದ್ದಾರೆ.
`ವಿಶಿಷ್ಟವಾದ ಸಸ್ಯ ಮತ್ತು ವನ್ಯ ಜೀವಿ ಪ್ರಭೇದಗಳು, ವಿಶ್ವದ ತಾಪಮಾನ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದರಿಂದ ಪಶ್ಚಿಮ ಘಟ್ಟಗಳನ್ನು ವಿಶ್ವ ಜೀವವೈವಿಧ್ಯತೆಯ ತಾಣವೆಂದು ಯುನೆಸ್ಕೋ ಘೋಷಿಸಿದೆ. ಇಂತಹ ಸಂದರ್ಭದಲ್ಲಿ ವನ್ಯ ಮತ್ತು ಮನುಷ್ಯನ ಸಂಘರ್ಷಗಳು ನಡೆಯುತ್ತಿದೆ. ಈ ಎಲ್ಲಾ ಸಮಸ್ಯೆಗಳಿಗೂ ಸಂಘಟನಾತ್ಮಕ ಸಮಾಲೋಚನೆ ಮತ್ತು ಪರಿಹಾರ ಒದಗಿಸಬೇಕಾಗಿರುವುದರಿಂದ ಸಿಎಸ್‌ಆರ್ ಕಾರ್ಯಕ್ರಮಗಳ ಮುಖ್ಯಸ್ಥರು ಸ್ಥಳೀಯ ಸಂಸ್ಥೆಗಳು ಮತ್ತು ಇಲಾಖೆಯೊಂದಿಗೆ ಕೈ ಜೋಡಿಸಿ’ ಎಂದವರು ಮನವಿ ಮಾಡಿದರು. `ಮುಖ್ಯ ಅತಿಥಿಗಳಾಗಿದ್ದ ಮೈಸೂರಿನ ಗ್ರಾಮ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಬಸವರಾಜು ಶ್ರೇಷ್ಠ ಅವರು ಮಾತನಾಡಿ `ಸಮಾಜದ ಬೇಡಿಕೆ ಮತ್ತು ಅವಶ್ಯಕತೆಗನುಗುಣವಾಗಿ ಯೋಜನೆಗಳು ರೂಪುಗೊಳ್ಳದೇ ಇರುವುದರಿಂದ ನಿಜವಾದ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಸಾಧ್ಯವಾಗುತ್ತಿಲ್ಲ. ರಾಜಕೀಯ ದೃಷ್ಟಿಕೋನದಲ್ಲಿ ಸಂಪನ್ಮೂಲಗಳ ಹಂಚಿಕೆ, ಸೌಲಭ್ಯ ಒದಗಿಸುವಲ್ಲಿ ತಾರತಮ್ಯ, ವಾಸ್ತವ ಅಂಶಗಳನ್ನು ಮರೆಮಾಚಿ ಅಂಕಿ ಅಂಶಗಳ ಮೂಲಕ ಸಮಾಜದ ದಿಕ್ಕು ತಪ್ಪಿಸುವ ಪ್ರಯತ್ನಗಳು ಸಾಮಾಜಿಕ ಬದಲಾವಣೆಯ ಅನಿಷ್ಠಗಳಾಗಿವೆ. ಸರ್ಕಾರ, ಸಂಘ-ಸAಸ್ಥೆಗಳು, ಸಿ ಎಸ್ ಆರ್. ಯೋಜನೆಗಳ ಮುಖ್ಯಸ್ಥರು ಸಮಸ್ಯೆಗಳ ಮೂಲವನ್ನು ಅರಿತು ಜವಾಬ್ದಾರಿ ನಿರ್ವಹಿಸಬೇಕು’ ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಹಂಪಿ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ಸ್ಕೊಡ್‌ವೆಸ್ ಸಂಸ್ಥೆಯ ಅಧ್ಯಕ್ಷ ಹಿ ಚಿ ಬೋರಲಿಂಗಯ್ಯ ಅವರು ಸ್ಕೊಡ್‌ವೆಸ್ ಸಂಸ್ಥೆ ನಡೆದು ಬಂದ ದಾರಿಯನ್ನು ವಿವರಿಸಿದರು. ಮುಂದಿನ 05 ವರ್ಷಗಳ ಯೋಜನೆಗಳ ಬಗ್ಗೆ ಸಭೆಗೆ ಪರಿಚಯಿಸಿದರು. ಸ್ಕೊಡ್‌ವೆಸ್ ಸಂಸ್ಥೆಯು ಪ್ರತೀ ವರ್ಷವೂ ಸಂಘಟಿಸುವ ಭಾಗೀದಾರರ ಸಮಾವೇಶದಲ್ಲಿ ಈ ಬಾರಿ ಗುಜರಾತ್ ದೇಸಾಯಿ ಫೌಂಡೇಶನ್‌ನ ನಿತಿನ್ ಸಿಂಗ್, ಬಯೋಕಾನ್ ಫೌಂಡೇಶನ್‌ನ ಡಾ.ವಿಕ್ರಮ್, ನಯನ ಜ್ಯೋತಿ ಟ್ರಸ್ಟ್ನ ಡಾ. ಜಯರಾಮನ್, ಗೋಕಲ್‌ದಾಸ್ ಎಕ್ಸ್ಪೋರ್ಟ್ಸ್ನ ರಾಜೇಂದ್ರಪ್ರಸಾದ, ನಾರಾಯಣ ಹೆಲ್ತ್ನ ಮುತ್ತರಾಜು, ಕ್ವೆಸ್ಟ್ ಅಲೈಯನ್ಸ್ನ ಅಭಿಷೇಕ್, ಕೆವಿಕೆಯ ರೂಪಾ ಪಾಟೀಲ್ ಸೇರಿದಂತೆ 15ಕ್ಕೂ ಹೆಚ್ಚು ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಕಾರ್ಯಕ್ರಮಾಧಿಕಾರಿ ನಾರಾಯಣ ಹೆಗಡೆ ಹಾಗೂ ಯೋಜನಾ ಮುಖ್ಯಸ್ಥ ವಿರೇಂದ್ರ ಸಿ ಸಂಸ್ಥೆಯ ಯೋಜನೆಗಳ ಪರಿಚಯ ಮಾಡಿದರು. ಭಾಗೀದಾರರ ಸಮಾವೇಶದ ಮೊಡರೇಟರ್ ಆಗಿದ್ದ ಅರಣ್ಯ ಮಹಾವಿದ್ಯಾಲಯದ ಡೀನ್ ಆರ್ ವಾಸುದೇವರವರು ಮಂಡನೆಯಾದ ಎಲ್ಲಾ ವಿಷಯಗಳ ಸಾರಾಂಶವನ್ನು ಸಮೀಕರಿಸಿ ವರದಿ ಮಂಡಿಸಿದರು. ಇದೇ ಸಂದರ್ಭದಲ್ಲಿ ಸ್ಕೊಡ್‌ವೆಸ್‌ನ ಆಡಳಿತ ಮಂಡಳಿಯ ನಿರ್ದೇಶಕರಾದ ದಯಾನಂದ ಅಗಾಸೆ, ಪ್ರತಿಭಾ ಭಟ್, ಸದಸ್ಯೆ ಲಲಿತಾ ಹೆಗಡೆ ಉಪಸ್ಥಿತರಿದ್ದರು. ಸ್ಕೊಡ್‌ವೆಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ನಿರ್ದೇಶಕ ಕೆ ಎನ್ ಹೊಸಮನಿ ವಂದಿಸಿದರು. ಸಂಸ್ಥೆಯ ಮುಖ್ಯ ಹಣಕಾಸು ಮತ್ತು ಆಡಳಿತಾಧಿಕಾರಿ ಸರಸ್ವತಿ ಎನ್ ರವಿಯವರ ನಿರ್ದೇಶನದಲ್ಲಿ ಪಶ್ಚಿಮ ಬಂಗಾಳದ ಶ್ರೇಯಾ ಮಜುಮದಾರ್ ಸಮಾವೇಶ ನಿರ್ವಹಣೆಯೊಂದಿಗೆ ಕಾರ್ಯಕ್ರಮ ಯಶಸ್ವಿಗೊಳಿಸಿದರು.