ಸಿದ್ದಾಪುರದ ವಸಂತ ನಾಯ್ಕ ಅವರು ವೇಗವಾಗಿ ಕಾರು ಓಡಿಸಿದ್ದು, ಆ ಕಾರು ರಿಕ್ಷಾಗೆ ಡಿಕ್ಕಿ ಹೊಡೆದಿದೆ. ಪರಿಣಾಮ ರಿಕ್ಷಾದಲ್ಲಿದ್ದ ಮೂವರು ಪ್ರಯಾಣಿಕರ ಜೊತೆ ಚಾಲಕ ಶ್ರೀನಿವಾಸ ಮಡಿವಾಳ ಅವರು ಗಾಯಗೊಂಡಿದ್ದಾರೆ. ಅದಾದ ನಂತರ ವಸಂತ ನಾಯ್ಕ ಅವರು ಅಪಘಾತದ ಬಗ್ಗೆ ದೂರು ನೀಡದಂತೆ ಶ್ರೀನಿವಾಸ ಮಡಿವಾಳ ಅವರಿಗೆ ಬೆದರಿಸಿದ್ದಾರೆ!
ಸದ್ಯ ಸಿದ್ದಾಪುರದ ಕೊಂಡ್ಲಿ ಗೋರಿಗುಡ್ಡದಲ್ಲಿ ವಾಸವಾಗಿರುವ ಬಾಲಿಕೊಪ್ಪ ಶ್ರೀನಿವಾಸ ನಾರಾಯಣ ಮಡಿವಾಳ ಅವರು ರಿಕ್ಷಾ ಚಾಲಕರಾಗಿ ಜೀವನ ನಡೆಸುತ್ತಿದ್ದಾರೆ. ಏಪ್ರಿಲ್ 15ರಂದು ಅವರ ರಿಕ್ಷಾಗೆ ಸೆಂಟ್ರೋ ಕಾರು ಗುದ್ದಿದೆ. ಹಾಳಾದಕಟ್ಟಾ ಕಡೆಯಿಂದ ಸಿದ್ದಾಪುರ ಕಡೆ ಹೊರಟಿದ್ದ ಬೇಡ್ಕಣಿ ಹುಲಿಮನೆಯ ವಸಂತ ರಾಮಾ ನಾಯ್ಕ ಅವರು ರಿಕ್ಷಾಗೆ ಕಾರು ಗುದ್ದಿದ್ದಾರೆ. ಪರಿಣಾಮ ಶ್ರೀನಿವಾಸ ಮಡಿವಾಳ ಅವರ ಮೂಗಿನಿಂದ ರಕ್ತ ಸುರಿದಿದೆ. ಜೊತೆಗೆ ಕುತ್ತಿಗೆ, ಬೆನ್ನು, ಎದೆಗೂ ಪೆಟ್ಟಾಗಿದೆ. ಆ ರಿಕ್ಷಾದಲ್ಲಿ ಸಂಚರಿಸುತ್ತಿದ್ದ ಸಿದ್ದಾಪುರದ ಪ್ರಣಮ್ಯ ರಾಘವೇಂದ್ರ ಆಚಾರಿ (11), ಗಾಯತ್ರಿ ನಾಗಭೂಷಣ (42), ಚಂದ್ರಶೇಖರ್ ಗಣಪತಿ ಆಚಾರಿ (59) ಅವರು ಸಹ ಅಪಘಾತದಿಂದ ನೋವು ಅನುಭವಿಸಿದ್ದಾರೆ.
ಬಸವನಗಲ್ಲಿಯ ವಿಠ್ಠೋಬಾ ದೇವಾಲಯ ಎದುರು ಈ ಅಪಘಾತ ನಡೆದಿದ್ದು, ಬಿಕ್ಕಳಸೆ ಕಡೆ ಹೊರಟಿದ್ದ ಬಾಲಿಕೊಪ್ಪದ ಶ್ರೀನಿವಾಸ ಮಡಿವಾಳ ಅವರು ಅದೇ ದಿನ ಸಿದ್ದಾಪುರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಪಡೆದಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಸಾಗರದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಏಪ್ರಿಲ್ 15ರಂದು ಅಪಘಾತ ನಡೆದಿದ್ದರೂ ಈ ವಿಷಯವನ್ನು ಶ್ರೀನಿವಾಸ ಮಡಿವಾಳ ಅವರು ಯಾರಿಗೂ ಹೇಳಿರಲಿಲ್ಲ. ಉಳಿದ ಪ್ರಯಾಣಿಕರು ಸಹ ಅಪಘಾತದ ಬಗ್ಗೆ ಮೌನವಾಗಿದ್ದು, ನೋವು ಅನುಭವಿಸಿದ್ದರು. ಹಾಲಿನ ಡೈರಿಯಲ್ಲಿ ಕೆಲಸ ಮಾಡುವ ಶ್ರೀನಿವಾಸ ಮಡಿವಾಳ ಅವರ ಪತ್ನಿ ದಾಕ್ಷಾಯಣಿ ಮಡಿವಾಳ ಅವರು ವಿಚಾರಿಸಿದಾಗ ಅಪಘಾತದ ಬಗ್ಗೆ ದೂರು ನೀಡದಂತೆ ವಸಂತ ನಾಯ್ಕ ಅವರು ಬೆದರಿಕೆ ಒಡ್ಡಿರುವುದು ಗೊತ್ತಾಯಿತು. ಅಪಘಾತ ಮಾಡಿದಲ್ಲದೇ ದೂರು ನೀಡದಂತೆಯೂ ಒತ್ತಡ ಹಾಕಿದ ವಸಂತ ನಾಯ್ಕ ಅವರ ವಿರುದ್ಧ ದಾಕ್ಷಾಯಣಿ ನಾಯ್ಕ ಅವರೇ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದರು. ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಶುರು ಮಾಡಿದರು.