ಬಿಸಿಲಿನ ತಾಪ ಸಹಿಸಲಾಗದೇ ಸಮುದ್ರ ಸ್ನಾನಕ್ಕೆ ಹೋಗಿದ್ದ ಗೋಕರ್ಣದ ಸುರೇಶ ಗೌಡ ಅವರು ಅದೇ ಸಮುದ್ರದ ನೀರು ಕುಡಿದು ಸಾವನಪ್ಪಿದ್ದಾರೆ. ಸಮುದ್ರದಲ್ಲಿ ಈಜಾಡುತ್ತಿರುವಾಗ ಅಸ್ವಸ್ಥರಾದ ಸುರೇಶ ಗೌಡ ಅವರು ದಡಕ್ಕೆ ಆಗಮಿಸಿದ ಕೆಲವೇ ಕ್ಷಣದಲ್ಲಿ ಕೊನೆಯುಸಿರೆಳೆದಿದ್ದಾರೆ.
ಗೋಕರ್ಣದ ಮಿಡ್ಲ ಕಡಲತೀರದ ಬಳಿ ಸುರೇಶ ಗೌಡ (54) ಅವರು ವಾಸವಾಗಿದ್ದರು. ಭಾನುವಾರದ ಬಿಸಿಲು ಸಹಿಸದೇ ಅವರು ಸಮುದ್ರ ಸ್ನಾನಕ್ಕೆ ನಿರ್ಧರಿಸಿದ್ದರು. ಈಜಾಡುವುದಕ್ಕಾಗಿ ನೀರಿಗೆ ಹಾರಿದ ಅವರು ಕೆಲ ಕಾಲ ಅಲ್ಲಿ ದೇಹವನ್ನು ತಂಪಾಗಿಸಿಕೊAಡರು. ಈ ವೇಳೆ ಅಲೆಗಳ ಅಬ್ಬರಕ್ಕೆ ಸಿಲುಕಿದ ಅವರು ಸಮುದ್ರದ ನೀರು ಕುಡಿದರು. ಅದೇ ನೀರನ್ನು ಉಸಿರಾಡಿ ಅಸ್ವಸ್ಥರಾದರು.
ಅದಾದ ನಂತರ ಅಲೆಗಳ ಅಬ್ಬರದಿಂದ ತಪ್ಪಿಸಿಕೊಂಡ ಸುರೇಶ ಗೌಡ ಅವರು ದಡಕ್ಕೆ ಬಂದರು. ಅಸ್ವಸ್ಥರಾಗಿದ್ದ ಅವರನ್ನು ಆಂಬುಲೆನ್ಸಿನ ಮೂಲಕ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಆಸ್ಪತ್ರೆ ಸೇರುವುದರೊಳಗೆ ಸುರೇಶ ಗೌಡ ಅವರು ಸಾವನಪ್ಪಿದ್ದರು. ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಯಾದ ಡಾ ಜಗದೀಶ ನಾಯ್ಕ, ಸಂತೆಗಳಿ ಆರೋಗ್ಯ ಕೇಂದ್ರದ ಡಾ ಶಿವಾ ನಾಯ್ಕ ಸೇರಿ ಸುರೇಶ ಗೌಡ ಅವರ ಮರಣೋತ್ತರ ಪರೀಕ್ಷೆ ನಡೆಸಿದರು.