ಯಲ್ಲಾಪುರದ ಉಮ್ಮಚ್ಗಿಯ ಶಿವಾನಂದ ಹೆಗಡೆ ಅವರಿಗೆ ಪೊಲೀಸ್ ಅಧಿಕಾರಿಯೊಬ್ಬರು ವಿಡಿಯೋ ಕಾಲ್ ಮಾಡಿದ್ದು, ಅವರು ಬೆದರಿಸಿದ ಕಾರಣ ಶಿವಾನಂದ ಹೆಗಡೆ ಅವರು 1.74 ಕೋಟಿ ರೂ ಹಣ ನೀಡಿದ್ದಾರೆ. ಅದಾದ ನಂತರ ಫೋನ್ ಮಾಡಿದವರು ಪೊಲೀಸ್ ಅಧಿಕಾರಿಯೇ ಅಲ್ಲ ಎಂದು ಗೊತ್ತಾಗಿದೆ!
ಯಲ್ಲಾಪುರದ ಉಮ್ಮಚ್ಗಿ ಪ್ರೌಢಶಾಲೆ ಎದುರು ಶಿವಾನಂದ ತಿಮ್ಮಪ್ಪ ಹೆಗಡೆ ಅವರು ವಾಸವಾಗಿದ್ದಾರೆ. ಎಲ್ ಐ ಸಿ ಎಜೆಂಟರಾಗಿ ಅವರು ಕೆಲಸ ಮಾಡಿಕೊಂಡಿದ್ದು, ಅದರ ಜೊತೆ ಕೃಷಿ ಕಾಯಕದಲ್ಲಿಯೂ ಅವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಜೀವನಪೂರ್ತಿ ತಾವು ದುಡಿದ ಹಣವನ್ನು ಅವರು ವಿವಿಧ ಕಡೆ ಹೂಡಿಕೆ ಮಾಡಿದ್ದಾರೆ. ಹೀಗಿರುವಾಗ ಏಪ್ರಿಲ್ 21ರಂದು ಶಿವಾನಂದ ಹೆಗಡೆ ಅವರಿಗೆ ಪೊಲೀಸರ ಹೆಸರಿನಲ್ಲಿ ಫೋನ್ ಬಂದಿದೆ. ಮಾತನಾಡಿದ ವ್ಯಕ್ತಿ ಪೊಲೀಸ್ ಸಮವಸ್ತç ಧರಿಸಿದ್ದು, ತಮ್ಮನ್ನು ಪೊಲೀಸರೆಂದು ಪರಿಚಯಿಸಿಕೊಂಡಿದ್ದಾರೆ. ಪೊಲೀಸರನ್ನು ನೋಡಿ ಶಿವಾನಂದ ಹೆಗಡೆ ಅವರು ಸಹ `ನಮಸ್ಕಾರ’ ಎಂದು ಕೈ ಮುಗಿದಿದ್ದಾರೆ.
ಅದಾದ ನಂತರ ಫೋನ್ ಮಾಡಿದ ವ್ಯಕ್ತಿ `ನಿಮ್ಮ ಆಧಾರ್ ಕಾರ್ಡ ಬಳಸಿ ಉಗ್ರಗ್ರಾಮಿಗಳು ಕೋಟ್ಯಂತರ ರೂ ಹಣ ವರ್ಗಾವಣೆ ಮಾಡಿದ್ದಾರೆ. ಕೆನರಾ ಬ್ಯಾಂಕ್ ಖಾತೆ ಮೂಲಕ ಹಣ ವರ್ಗವಾಗಿದೆ. ಹೀಗಾಗಿ ನಿಮ್ಮ ಹೆಸರಿನಲ್ಲಿರುವ ಬ್ಯಾಂಕ್ ಖಾತೆಯಿಂದ ಅಕ್ರಮ ಹಣ ವರ್ಗಾವಣೆ ನಡೆದ ಬಗ್ಗೆ ಪ್ರಕರಣ ದಾಖಲಿಸಿದ್ದೇವೆ’ ಎಂದು ಹೇಳಿದ್ದಾರೆ. `ತಾನೇನು ತಪ್ಪು ಮಾಡಿಲ್ಲ’ ಎಂದು ಶಿವಾನಂದ ಹೆಗಡೆ ಅವರು ಹೇಳಿದರೂ, ಫೋನ್ ಮಾಡಿದವರು ಅದನ್ನು ಕೇಳಿಸಿಕೊಂಡಿಲ್ಲ. `ನಿಮ್ಮ ಕೆನರಾ ಬ್ಯಾಂಕ್ ಖಾತೆಯ ಎಟಿಎಂ ಕಾರ್ಡ ಕಳುಹಿಸಿ’ ಎಂದು ಸೂಚಿಸಿದ ಕಾರಣ ಶಿವಾನಂದ ಹೆಗಡೆ ಅವರು ಅದನ್ನು ಕಳುಹಿಸಿದ್ದಾರೆ. ಅದಾದ ನಂತರ `ನಿಮ್ಮನ್ನು ನಾವು ಬಂಧಿಸುತ್ತೇವೆ’ ಎಂದು ಶಿವಾನಂದ ಹೆಗಡೆ ಅವರನ್ನು ಹೆದರಿಸಿದ್ದಾರೆ.
ನಂತರ ಮತ್ತೊಬ್ಬ ವ್ಯಕ್ತಿ ವಿಡಿಯೋ ಕಾಲ್ ಮಾಡಿ, `ಮುಂಬೈನ ಐಪಿಎಸ್ ಅಧಿಕಾರಿ’ ಎಂದು ಪರಿಚಯಿಸಿಕೊಂಡಿದ್ದಾರೆ. `ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಲಾಗಿದೆ. ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಎಲ್ಲಾ ಹಣವನ್ನು ರಿಸರ್ವ್ ಬ್ಯಾಂಕ್’ಗೆ ಜಮಾ ಮಾಡಬೇಕು. ತನಿಖೆಯಲ್ಲಿ ನೀವು ನಿರ್ದೋಷಿ ಎಂದು ಕಂಡುಬAದರೆ ಹಣವನ್ನು ಮರಳಿ ಕೊಡುತ್ತೇವೆ’ ಎಂದು ಶಿವಾನಂದ ಹೆಗಡೆ ಅವರಲ್ಲಿ ಹೇಳಿದ್ದಾರೆ. `ತನಿಖೆ ಮುಗಿಯುವವರೆಗೆ ಈ ವಿಷಯವನ್ನು ಯಾರಿಗೂ ಹೇಳಬಾರದು. ಹೇಳಿದರೆ, ತಕ್ಷಣ ನಿಮ್ಮನ್ನು ಜೈಲಿಗೆ ಹಾಕುತ್ತೇವೆ’ ಎಂದು ಬೆದರಿಸಿದ್ದಾರೆ. ನಂತರ ಮತ್ತೊಬ್ಬ ವ್ಯಕ್ತಿ ಡಿಐಜಿ ಹುದ್ದೆಯ ಅಧಿಕಾರಿ ಎಂದು ಹೇಳಿ ಮತ್ತೆ ವಿಡಿಯೋ ಕಾಲ್ ಮಾಡಿ, `ತಕ್ಷಣ ಹಣ ವರ್ಗಾವಣೆ ಮಾಡಿ’ ಎಂದಿದ್ದಾರೆ.
ಈ ವೇಳೆ ಶಿವಾನಂದ ಹೆಗಡೆ ಅವರು `ತಾನು ದುಡಿದ ಹಣವೆಲ್ಲವೂ ಫಿಕ್ಸ್ ಡಿಪಾಜಿಟ್ ಆಗಿದೆ. ಅದನ್ನು ತೆಗೆಯಲು ಸಮಯ ಬೇಕು’ ಎಂದಿದ್ದಾರೆ. ಆಗ, ಫೋನ್ ಮಾಡಿದವರು `ಪ್ರತಿ ದಿನ ನೀವು ನಿಮ್ಮ ಲೊಕೇಶನ್ ಹಾಗೂ ಫೋಟೋ ವಾಟ್ಸಪ್ ಮಾಡಬೇಕು. ಎಲ್ಲಾ ಎಲ್ಲಾ ಹಣ ವರ್ಗಾಯಿಸಬೇಕು’ ಎಂದು ಸೂಚಿಸಿದ್ದಾರೆ. ಪೊಲೀಸರು ನಿಜವಾಗಿಯೇ ತನಿಖೆ ನಡೆಸುತ್ತಿದ್ದಾರೆ ಎಂದು ಭಾವಿಸಿದ ಶಿವಾನಂದ ಹೆಗಡೆ ಅವರು ಏಪ್ರಿಲ್ 24ರವರೆಗೆ ತಮ್ಮ ಖಾತೆಯಲ್ಲಿದ್ದ ಹಣವನ್ನು ಫೋನ್ ಮಾಡಿದವರು ಸೂಚಿಸಿದ ಖಾತೆಗೆ ವರ್ಗಾಯಿಸಿದ್ದಾರೆ. ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 1,74,50,000 ರೂ ಹಣವನ್ನು ಅವರು ಕಳುಹಿಸಿದ್ದಾರೆ. ಅದಾದ ನಂತರ ಅತ್ತ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಇಲ್ಲದೇ ಹೋದಾಗ ತಾವು ಮೋಸ ಹೋದ ವಿಷಯ ಗೊತ್ತಾಗಿದೆ. ಕಾರವಾರಕ್ಕೆ ಹೋದ ಶಿವಾನಂದ ಹೆಗಡೆ ಅವರು ತಮಗಾದ ಅನ್ಯಾಯ, ಮೋಸದ ಬಗ್ಗೆ ಸೈಬರ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.