ಹೊನ್ನಾವರದ ಜೋಗಿಮಠದಲ್ಲಿರುವ ಡಿ ವಿ ಕಾಮತ್ ಅವರ ಮನೆ ನಿರ್ಮಾಣ ಕೆಲಸಕ್ಕೆ ಹೋಗಿದ್ದ ಹಳದಿಪುರ ಬಳಿಯ ರಾಘವೇಂದ್ರ ಗೌಡ ಅವರಿಗೆ ಕಬ್ಬಿಣದ ಬ್ಲೇಡು ತಾಗಿದೆ. ರಕ್ತದ ಮಡುವಿನಲ್ಲಿ ಹೊರಳಾಡಿ ರಾಘವೇಂದ್ರ ಗೌಡ ಅವರು ಸಾವನಪ್ಪಿದ್ದಾರೆ.
ಹೊನ್ನಾವರದ ಹಳದಿಪುರ ಅಗ್ರಹಾರ ಬಡಗಣಿ ಬಳಿ ರಾಘವೇಂದ್ರ ಗಣಪು ಗೌಡ (45) ಅವರು ವಾಸವಾಗಿದ್ದರು. ಕಟ್ಟಡ ಕಾರ್ಮಿಕರಾಗಿ ದುಡಿದು ಅವರು ಕುಟುಂಬ ನಡೆಸುತ್ತಿದ್ದರು. ಹೊನ್ನಾವರ ಪಟ್ಟಣದ ಜೋಗಿಮಠದಲ್ಲಿರುವ ಡಿ ವಿ ಕಾಮತ್ ಅವರ ಮನೆ ನಿರ್ಮಾಣ ಕೆಲಸದ ಜವಾಬ್ದಾರಿಯನ್ನು ಅವರು ಹೊತ್ತಿದ್ದರು. ರಾಘವೇಂದ್ರ ಗೌಡ ಅವರು ಏಪ್ರಿಲ್ 28ರಂದು ಅವರ ಮನೆಯ ಕಿಟಕಿ ಕೂರಿಸುವ ಕೆಲಸದಲ್ಲಿ ತೊಡಗಿದ್ದರು.
ಕಿಟಕಿಗೆ ಗ್ರಿಲ್ ಮಾಡುತ್ತಿದ್ದಾಗ ಆ ಗ್ರಿಲ್ ಯಂತ್ರಕ್ಕೆ ಇದ್ದ ಬ್ಲೇಡು ಕಳಚಿ ಬಿದ್ದಿತು. ತುಂಡಾಗಿ ಬೀಳುವ ಮುನ್ನ ಆ ಬ್ಲೇಡು ರಾಘವೇಂದ್ರ ಗೌಡ ಅವರ ಗಡ್ಡಕ್ಕೆ ಬಡಿಯಿತು. ರಕ್ತದ ಮಡುವಿನಲ್ಲಿ ಹೊರಳಾಟ ನಡೆಸಿದ ರಾಘವೇಂದ್ರ ಗೌಡ ಅವರನ್ನು ಹೊನ್ನಾವರದ ಶ್ರೀದೇವಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಶಿಫಾರಸ್ಸು ಮಾಡಿದರು.
ಹೀಗಾಗಿ ರಾಘವೇಂದ್ರ ಗೌಡ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ನಡೆಯಿತು. ಭಟ್ಕಳ ದಾಡಿದಾಗ ಅವರಲ್ಲಿ ಉಸಿರಾಟ ಸಮಸ್ಯೆ ಕಾಣಿಸಿತು. ಹೀಗಾಗಿ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿನ ವೈದ್ಯರು ರಾಘವೇಂದ್ರ ಗೌಡ ಅವರು ಸಾವನಪ್ಪಿದ ವಿಷಯ ತಿಳಿಸಿದರು. ಈ ಸಾವಿನ ಬಗ್ಗೆ ರಾಘವೇಂದ್ರ ಗೌಡ ಅವರ ತಮ್ಮ, ಆಟೋ ಚಾಲಕರಾಗಿರುವ ನಾಗರಾಜ ಗಣಪು ಗೌಡ ಅವರು ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದರು.