ಯಲ್ಲಾಪುರದಿಂದ ಶಿರಸಿ ಮಾರ್ಗವಾಗಿ ಸಿಮೆಂಟ್ ತುಂಬಿಕೊoಡು ಹೊರಟಿದ್ದ ಲಾರಿ ಪಲ್ಟಿಯಾಗಿದೆ. ಲಾರಿ ಅಡಿ ಸಿಕ್ಕಿಬಿದ್ದಿದ್ದ ಚಾಲಕನನ್ನು ಆನಂದ ಭೋವಿವಡ್ಡರ್, ನಿತಿನ ನಾಯ್ಕ, ವಸಂತ ನಾಯ್ಕ ಸೇರಿ ರಕ್ಷಿಸಿದ್ದಾರೆ.
ಮಂಗಳವಾರ ಮಧ್ಯಾಹ್ನ ವಿಜಯಪುರದ ಚಾಲಕರೊಬ್ಬರು ಸಿಮೆಂಟ್ ಚೀಲವನ್ನು ತುಂಬಿಕೊoಡು ಯಲ್ಲಾಪುರ-ಶಿರಸಿ ಮಾರ್ಗವಾಗಿ ಹೊರಟಿದ್ದರು. ಚವತ್ತಿ ತಿರುವಿನ ಬಳಿ ಆ ಲಾರಿ ಅಪಘಾತಕ್ಕೀಡಾಯಿತು. ಲಾರಿ ಸಂಪೂರ್ಣವಾಗಿ ಉಲ್ಟಾ ಆಗಿದ್ದು, ಲಾರಿ ಚಾಲಕ ಅಡಿಗೆ ಬಿದ್ದರು. ನೋವಿನಲ್ಲಿ ನರಳಾಡುತ್ತಿದ್ದ ಚಾಲಕನನ್ನು ಉಮ್ಮಚ್ಗಿಯ ಆನಂದ ಭೋವಿವಡ್ಡರ್ ಅವರು ನೋಡಿದರು. ಚಿಪಗೇರಿಯ ನಿತಿನ್ ನಾಯ್ಕ, ವಸಂತ ನಾಯ್ಕ ಅವರ ಜೊತೆ ಸೇರಿ ಆ ಚಾಲಕನನ್ನು ಲಾರಿಯಿಂದ ಹೊರಗೆಳೆದರು.
ಈ ವೇಳೆ ಉಮ್ಮಚ್ಗಿಯ ಭರತ ನಾಯ್ಕ ಹಾಗೂ ಸುಮಂತ ಅವರು ಅಲ್ಲಿಗೆ ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆಗೆ ಕೈ ಜೋಡಿಸಿದರು. ಅಲ್ಲಿದ್ದವರೇ ಆಂಬುಲೆನ್ಸ್’ಗೆ ಫೋನ್ ಮಾಡಿ ಮಾಹಿತಿ ನೀಡಿದ್ದು, ಆಂಬುಲೆನ್ಸ ಚಾಲಕ ಪವನ ನಾಯ್ಕ ಅವರು ಮುತುವರ್ಜಿವಹಿಸಿ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದರು. ಆ ವೇಳೆಗೆ ಅಲ್ಲಿಗೆ ಪೊಲೀಸರು ಸಹ ಆಗಮಿಸಿದ್ದು, ಅಪಘಾತದ ವಿಧಾನದ ಬಗ್ಗೆ ಚರ್ಚಿಸಿದರು. ಸದ್ಯದ ಮಾಹಿತಿ ಪ್ರಕಾರ, ಚಾಲಕನ ಅತಿಯಾದ ವೇಗ ಹಾಗೂ ನಿರ್ಲಕ್ಷದ ಚಾಲನೆ ಅಪಘಾತಕ್ಕೆ ಕಾರಣ ಎನ್ನಲಾಗಿದೆ.