ನದಿ ಜೋಡಣೆ ವಿಷಯವಾಗಿ ಜನ ಹೋರಾಟ ನಡೆಸುತ್ತಿದ್ದು, ಅದರ ನಡುವೆಯೂ ಕಾಡು ಗ್ರಾಮಗಳಲ್ಲಿ ಯೋಜನೆ ಅನುಷ್ಠಾನದ ಸಮೀಕ್ಷೆ ನಡೆದಿದೆ. ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ ಅಧಿಕಾರಿಗಳು ಶಿರಸಿ – ಯಲ್ಲಾಪುರ ಭಾಗದ ಕಾಡಿಗೆ ಭೇಟಿ ನೀಡಿ ಅಲ್ಲಿದ್ದ ನದಿ ನೀರು ನೋಡಿದ್ದಾರೆ. ಲಭ್ಯವಿರುವ ಅಲ್ಪ ಪ್ರಮಾಣದ ನೀರನ್ನು ದೊಡ್ಡ ದೊಡ್ಡ ಕೊಳವೆಗಳ ಮೂಲಕ ಬೇರೆ ಕಡೆ ಒಯ್ಯುವ ಯೋಜನೆ ಮುಂದುವರೆಸಿದ್ದಾರೆ.
ವಿವಿಧ ಕ್ಷೇತ್ರಗಳಿಗೆ ಭೇಟಿ ನೀಡಿದ ಅಧಿಕಾರಿಗಳು ಪಂಪ್‌ಹೌಸ್, ಬ್ಯಾರೇಜ್ ಮುಂತಾದ ಸ್ಥಳ ನಿರ್ಮಾಣದ ಜಾಗ ಪರಿಶೀಲನೆ ಮಾಡಿದ್ದಾರೆ. ಎನ್‌ಡಬ್ಲ್ಯುಡಿಎ ಈ ಹಿಂದೆ ರಚಿಸಿದ ಡಿಪಿಆರ್‌ನಲ್ಲಿ ಇದ್ದ ಅಂಶಗಳನ್ನು ಆಧರಿಸಿ ಅಧಿಕಾರಿಗಳ ತಂಡ ಸ್ಥಳ ಭೇಟಿ ನಡೆಸಿದೆ. ಸಮುದ್ರಕ್ಕೆ ಹರಿದು ಹೋಗುವ ನೀರಿನಲ್ಲಿ ಶೇ 8ರಿಂದ 10ರಷ್ಟು ನೀರನ್ನು ಮಾತ್ರ ಬಳಸಿಕೊಂಡು ಈ ಯೋಜನೆ ರೂಪಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಅರಣ್ಯ ಪ್ರದೇಶಕ್ಕೆ ಅತಿ ಕಡಿಮೆ ಹಾನಿಯಾಗುವಂತೆ ಅಲ್ಪ ಭಾಗ ಮಾತ್ರ ಕಾಲುವೆಗಳನ್ನು ನಿರ್ಮಿಸುವುದಾಗಿಯೂ ವಿವರಿಸಿದ್ದಾರೆ.
ಪೈಪ್‌ಲೈನ್ ಹಾಗೂ ಸುರಂಗದ ಮೂಲಕ ನೀರನ್ನು ಹೇಗೆ ಸಾಗಿಸಬಹುದು? ಎನ್ನುವುದರ ಬಗ್ಗೆ ಅಧಿಕಾರಿಗಳ ತಂಡದವರು ಪರಿಶೀಲಿಸಿದ್ದಾರೆ. ಈ ಭಾಗದ ಮಣ್ಣು ಪರೀಕ್ಷೆ, ಅರಣ್ಯ ಹಾಗೂ ವನ್ಯಜೀವಿಗಳಿಗೆ ಹಾನಿ ಉಂಟಾಗುವ ವಿಚಾರಗಳ ಬಗ್ಗೆ ಈವರೆಗೂ ಸಮೀಕ್ಷೆ ನಡೆದಿಲ್ಲ. ಆ ಸಮೀಕ್ಷೆಯೂ ಪೂರ್ಣವಾದ ಬಳಿಕ ಸಮಿತಿ ವರದಿ ಸಿದ್ಧಪಡಿಸಲಿದೆ. ಅದಾದ ನಂತರ ಪರಿಷ್ಕೃತ ಡಿಪಿಆರ್ ಸಿದ್ಧವಾಗಲಿದ್ದು, ಡಿಪಿಆರ್ ಆಧರಿಸಿ ಕೇಂದ್ರ ಪರಿಸರ ಮಂತ್ರಾಲಯಕ್ಕೆ ಪರಿಸರ ಅನುಮತಿಗಾಗಿ ಅರ್ಜಿ ಸಲ್ಲಿಸಲಾಗುತ್ತದೆ. ಆ ನಂತರ ಸಾರ್ವಜನಿಕ ಅಹವಾಲು ಸಭೆ ನಡೆಯಲಿದೆ.
ಉತ್ತರ ಕನ್ನಡ ಜಿಲ್ಲೆಯ ಜನ ಈ ಅವೈಜ್ಞಾನಿಕ ಯೋಜನೆಗೆ ವಿರೋಧವ್ಯಕ್ತಪಡಿಸಿದ್ದಾರೆ. ಜನಪ್ರತಿನಿಧಿಗಳು ಸಹ ಯೋಜನೆ ಬಗ್ಗೆ ವಿರೋಧಿಸಿದ್ದು, ಸಚಿವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. `ಈ ಯೋಜನೆ ಬೇಡವೇ ಬೇಡ’ ಎಂದು ಸಮೀಪದ ನಿವಾಸಿಗಳು ಹೇಳುತ್ತಿದ್ದಾರೆ. ಅದಾಗಿಯೂ, ಸರ್ಕಾರ ಯೋಜನೆ ಮಾಡಲು ಆಸಕ್ತಿವಹಿಸಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.