ಮುರುಡೇಶ್ವರದ ಬಳಿ ಶಿಲ್ಪಿ ಕೆಲಸ ಮಾಡಿಕೊಂಡಿದ್ದ ನಾಗರಾಜ ನಾಯ್ಕ ಅವರು ತಮ್ಮ ಸ್ನೇಹಿತ ದರ್ಶನ್ ಅವರಿಗೆ ಸಹಾಯ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಾಗರಾಜ ನಾಯ್ಕ ಅವರು ಅಭಿಷೇಕ ನಾಯ್ಕ ಅವರ ಬಳಿ ತುರ್ತಾಗಿ 30 ಸಾವಿರ ರೂ ಹಣಪಡೆದು ಅದನ್ನು ದರ್ಶನ್ ಅವರಿಗೆ ನೀಡಿದ್ದು, ಆ ಹಣವನ್ನು ದರ್ಶನ್ ಅವರು ಮರಳಿಸುತ್ತಿಲ್ಲ. ಹಣ ಕೊಟ್ಟಿದ್ದ ಅಭಿಷೇಕ ನಾಯ್ಕ ಅವರು ನಾಗರಾಜ ನಾಯ್ಕ ಅವರನ್ನು ಬಿಡುತ್ತಿಲ್ಲ.
ಭಟ್ಕಳದ ಮುರುಡೇಶ್ವರ ಬಳಿಯ ಬೈಲೂರು ನೀರಗದ್ದೆಯಲ್ಲಿ ನಾಗರಾಜ ಚಂದ್ರಹಾಸ ನಾಯ್ಕ ಅವರು ವಾಸವಾಗಿದ್ದಾರೆ. ಶಿಲ್ಪಿ ಕೆಲಸ ಮಾಡಿಕೊಂಡಿರುವ ಅವರು ಸ್ನೇಹಿತರ ನೋವಿಗೆ ತ್ವರಿತವಾಗಿ ಸ್ಪಂದಿಸುವ ಸ್ವಭಾವದವರಾಗಿದ್ದು, ತಮ್ಮ ಸ್ನೇಹಿತನಿಗೆ ಸಹಾಯ ಮಾಡಿ ಸಮಸ್ಯೆಗೆ ಸಿಲುಕಿದ್ದಾರೆ. ಸ್ನೇಹಿತ ದರ್ಶನ್ ಅವರ ಆರ್ಥಿಕ ಸಮಸ್ಯೆ ನೋಡಿದ ನಾಗರಾಜ ನಾಯ್ಕ ಅವರು ಮುರುಡೇಶ್ವರದ ಚಂದ್ರಹಿತ್ಲುವಿನ ಅಭಿಷೇಕ ನಾಗರಾಜ ನಾಯ್ಕ ಅವರ ಸಹಾಯ ಯಾಚಿಸಿದ್ದಾರೆ. ಅಭಿಷೇಕ್ ನಾಯ್ಕ ಅವರು ನೀಡಿದ 30 ಸಾವಿರ ರೂ ಹಣವನ್ನು ಅವರು ದರ್ಶನ್ ಅವರಿಗೆ ನೀಡಿದ್ದಾರೆ. ಆದರೆ, ಆ ಹಣವನ್ನು ದರ್ಶನ್ ಅವರು ಮರಳಿ ಕೊಟ್ಟಿಲ್ಲ.
ಈ ನಡುವೆ ಅಭಿಷೇಕ್ ನಾಯ್ಕ ಅವರು ನಿತ್ಯವೂ ನಾಗರಾಜ ನಾಯ್ಕ ಅವರಿಗೆ ಫೋನ್ ಮಾಡಿ ಹಿಂಸೆ ನೀಡುತ್ತಿದ್ದಾರೆ. `ತನ್ನ ಹಣ ಕೊಡು’ ಎಂದು ಅವರು ಪದೇ ಪದೇ ಹೇಳುತ್ತಿದ್ದು, ಇದರಿಂದ ನಾಗರಾಜ ನಾಯ್ಕ ಅವರು ಸಮಸ್ಯೆ ಅನುಭವಿಸುತ್ತಿದ್ದಾರೆ. ಏಪ್ರಿಲ್ 22ರಂದು ಮುರುಡೇಶ್ವರ ಕನ್ನಡ ಶಾಲೆ ಬಳಿ ನಾಗರಾಜ ನಾಯ್ಕ ಅವರನ್ನು ಅಭಿಷೇಕ್ ನಾಯ್ಕ ಅವರು ಅಡ್ಡಗಟ್ಟಿದ್ದಾರೆ. `ಹಣ ಕೊಡದಿದ್ದರೆ ಕೊಲೆ ಮಾಡುವೆ’ ಎಂದು ಅವರು ಬೆದರಿಸಿದ್ದಾರೆ. ಈ ಬೆದರಿಕೆ ಕಾರಣ ನಾಗರಾಜ ನಾಯ್ಕ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಬೆದರಿಕೆಯ ಬಗ್ಗೆ ಪೊಲೀಸ್ ದೂರು ನೀಡಿದ್ದು, ಸದ್ಯ ಮುರುಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಶುರು ಮಾಡಿದ್ದಾರೆ.
`ಹಣ ಕೊಟ್ಟು ಸ್ನೇಹ ಕಳೆದುಕೊಳ್ಳಬೇಡಿ’