ಜೊಯಿಡಾದ ಕಾಳಿ ಹುಲಿ ಯೋಜನೆ ವ್ಯಾಪ್ತಿಯಲ್ಲಿ ಚಿರತೆ ಕಾಟ ಜೋರಾಗಿದೆ. ಪಣಸೋಲಿ ಬಳಿ ವೃದ್ಧೆಯೊಬ್ಬರ ಮೇಲೆ ಚಿರತೆ ಆಕ್ರಮಣ ಮಾಡಿದೆ. 70 ವರ್ಷದ ಸುಶೀಲಾ ದೇವಿದಾಸ್ ಅವರು ಚಿರತೆ ಜೊತೆ ಸೆಣಸಾಟ ನಡೆಸಿ ಸಾವು ಗೆದ್ದು ಬಂದಿದ್ದಾರೆ!
ಪಣಸೋಲಿ ಸಮೀಪದ ಅರ್ವುಲಿಯ ದಾಬೆಯ ಸುಶೀಲಾ ಶಾಂತರಾಮ್ ದೇವಿದಾಸ್ ಅವರ ಮೇಲೆ ಚಿರತೆ ದಾಳಿ ಮಾಡಿದೆ. ಸೋಮವಾರ ನಸುಕಿನಲ್ಲಿ ಅವರು ಮನೆಯಿಂದ ಹೊರ ಬಂದಾಗ ಕಾದು ಕುಳಿತಿದ್ದ ಚಿರತೆ ಏಕಾಏಕಿ ಆಕ್ರಮಣ ಮಾಡಿದ್ದು, ಆ ಆಘಾತದಲ್ಲಿಯೂ ಸುಶೀಲಾ ದೇವಿದಾಸ್ ಅವರು ಸಾಕಷ್ಟು ಹೋರಾಟ ನಡೆಸಿದ್ದಾರೆ. ಸುಶೀಲಾ ಅವರ ಕೂಗು-ಆಕಂದ್ರನಕ್ಕೆ ಚಿರತೆ ಅಲ್ಲಿಂದ ಪರಾರಿಯಾಗಿದೆ. ಗಂಭೀರ ಪ್ರಮಾಣದಲ್ಲಿ ಗಾಯಗೊಂಡ ಸುಶೀಲ ದೇವಿದಾಸ್ ಅವರು ಸದ್ಯ ಆಸ್ಪತ್ರೆ ಸೇರಿದ್ದಾರೆ.
ನಸುಕಿನ 4 ಗಂಟೆ ವೇಳೆಗೆ ಸುಶೀಲಾ ಅವರಿಗೆ ಎಚ್ಚರವಾಗಿದ್ದು, ಮೂತ್ರ ವಿಸರ್ಜನೆಗಾಗಿ ಅವರು ಮನೆಯಿಂದ ಹೊರ ಹೋಗಿದ್ದಾರೆ. ಮನೆ ಅಂಚಿನ ಪೊದೆಯಲ್ಲಿ ಅವಿತಿದ್ದ ಚಿರತೆ ಈ ವೇಳೆ ಸುಶೀಲಾ ಅವರ ಮೈಮೇಲೆ ಹಾರಿದೆ. ಬಾಗಿಲು ತೆರೆದ ತಕ್ಷಣ ಕಾಡು ಪ್ರಾಣಿ ಕಂಡ ಸುಶೀಲಾ ಅವರು ತಕ್ಷಣ ರಕ್ಷಣೆಗೆ ಪ್ರಯತ್ನಿಸಿದರಾದರೂ ಅದು ಪ್ರಯೋಜನಕ್ಕೆ ಬರಲಿಲ್ಲ. ಈ ವೇಳೆ ಚಿರತೆಯ ಉಗುರುಗಳಿಂದ ಸುಶೀಲಾ ಅವರ ಮೈ ಪರಿಚಿದ್ದು, ಪ್ರತಿಯಾಗಿ ಸುಶೀಲಾ ಅವರು ಸಹ ಚಿರತೆಯನ್ನು ದೂರ ತಳ್ಳುವ ಪ್ರಯತ್ನ ಮಾಡಿದ್ದಾರೆ.
ಈ ದಾಳಿಯಲ್ಲಿ ಸುಶೀಲಾ ದೇವಿದಾಸ್ ಅವರ ತಲೆ ಹಾಗೂ ದೇಹದ ವಿವಿಧ ಭಾಗಗಳಿಗೆ ಗಂಭೀರ ಗಾಯಗಳಾಗಿವೆ. ನಂತರ ಅವರು ಅಸ್ವಸ್ಥರಾಗಿ ಕುಸಿದು ಬಿದ್ದಿದ್ದು, ಸ್ಥಳೀಯರು ನೆರವಿಗೆ ಆಗಮಿಸಿದ್ದಾರೆ. ಚಿರತೆ ದಾಳಿಯ ಬಗ್ಗೆ ಅಲ್ಲಿನ ಜನ ಅರಣ್ಯ ಇಲಾಖೆಗೂ ಮಾಹಿತಿ ನೀಡಿದ್ದಾರೆ. ಮನುಷ್ಯನ ಮೇಲೆ ಚಿರತೆ ದಾಳಿ ಮಾಡಿದ್ದರಿಂದ ಅವುರ್ಲಿ ದಾಬೆ ಗ್ರಾಮದಲ್ಲಿ ಭೀತಿಯ ವಾತಾವರಣ ಕಂಡುಬAದಿದೆ. ಪಣಸೋಲಿ ವಲಯದ ಅರಣ್ಯಾಧಿಕಾರಿ ರವಿಕಿರಣ್ ಸಂಪಗಾವಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.