ಹದಗೆಟ್ಟ ಶಿರಸಿ-ಹಾವೇರಿ ರಾಷ್ಟಿಯ ಹೆದ್ದಾರಿ ವಿರುದ್ಧ ಶಿರಸಿಯ ಜನ ಸಿಡಿದೆದ್ದಿದ್ದಾರೆ. ಆ ಹೆದ್ದಾರಿ ಸಂಚಾರ ಬಂದ್ ಮಾಡಿ ಬೀದಿಗಿಳಿದು ಪ್ರತಿಭಟನೆ ಮಾಡಿದ್ದಾರೆ.
ಶಿರಸಿ-ಹಾವೇರಿ ರಸ್ತೆ ಕೆಲ ನಿಧಾನವಾಗಿರುವುದನ್ನು ಪ್ರತಿಭಟನಾಕಾರರು ಖಂಡಿಸಿದ್ದಾರೆ. ಜೊತೆಗೆ ಅವೈಜ್ಞಾನಿಕ ಕಾಮಗಾರಿಯಿಂದ ಆಗುತ್ತಿರುವ ಅನಾಹುತಗಳ ಬಗ್ಗೆ ಗಮನಸೆಳೆದಿದ್ದಾರೆ. `ಹೆದ್ದಾರಿ ಪ್ರಾಧಿಕಾರಕ್ಕೆ ಶ್ರದ್ಧಾಂಜಲಿ’ ಎಂಬ ಕಟೌಟ್ ನಿಲ್ಲಿಸಿ ತಮ್ಮ ಆಕ್ರೋಶಹೊರಹಾಕಿದ್ದಾರೆ. ಸುಡುವ ಬಿಸಿಲಿನಲ್ಲಿಯೂ ಸಾವಿರಾರು ಜನ ಪ್ರತಿಭಟನೆಗೆ ಆಗಮಿಸಿದ್ದು, ಆಡಳಿತದ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಪ್ರತಿಭಟನೆ ಶುರುವಾದ ಅವಧಿಯಿಂದಲೂ ಅಧಿಕಾರಿಗಳು ಜನರ ಮನವೊಲೈಸುವ ಪ್ರಯತ್ನ ಮಾಡಿದರೂ ಅದು ಪ್ರಯೋಜನಕ್ಕೆ ಬಂದಿಲ್ಲ. `ಜನರ ಸಮಸ್ಯೆ ಆಲಿಸುವುದಕ್ಕಾಗಿ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರಬೇಕು’ ಎಂದು ಆಗ್ರಹಿಸಿ ಪ್ರತಿಭಟನೆ ನಡೆದಿದೆ.
ಬಿಸಲಕೊಪ್ಪ ಬಳಿ ಸಂಚರಿಸುವ ಎಲ್ಲಾ ವಾಹನಗಳನ್ನು ತಡೆದು ಜನ ಪ್ರತಿಭಟನೆ ಮಾಡಿದ್ದಾರೆ. ಬಿಸಿಲಕೊಪ್ಪದ ಸರ್ಕಲ್ ಬಳಿ `ಬದುಕಿಗಾಗಿ ಹೋರಾಟ’ ಎಂದು ಹೇಳಿದ ಪ್ರತಿಭಟನಾಕಾರರು ಆ ಮಾರ್ಗವಾಗಿ ಸಂಚರಿಸುವ ವಾಹನ ಸವಾರರ ಬೆಂಬಲ ಕೋರಿದ್ದಾರೆ. ಹೆದ್ದಾರಿ ಮಾರ್ಗವಾಗಿ ವಾಹನ ಓಡಾಟಕ್ಕೆ ಅವಕಾಶ ಕೊಡದೇ ತಮ್ಮ ಅಸಮಧಾನವನ್ನು ಸರ್ಕಾರಕ್ಕೆ ಮುಟ್ಟಿಸುವ ಪ್ರಯತ್ನ ಮಾಡಿದ್ದಾರೆ. ರಸ್ತೆ ಅವ್ಯವಸ್ಥೆಯ ಬಗ್ಗೆ ವಾಹನ ಸವಾರರು ಸಹ ಆಕ್ರೋಶವ್ಯಕ್ತಪಡಿಸಿದ್ದು, ಅವರು ಸ್ವಯಂ ಪ್ರೇರಣೆಯಿಂದ ಪ್ರತಿಭಟನೆಯನ್ನು ಬೆಂಬಲಿಸಿದ್ದಾರೆ.
ಹೋರಾಟಗಾರರು ಜನಪ್ರತಿನಿಧಿ ಹಾಗೂ ಗುತ್ತಿಗೆದಾರರ ವಿರುದ್ಧ ಸಾಕಷ್ಟು ಸಲ ಧಿಕ್ಕಾರ ಕೂಗಿದರು. ಶಾಸಕ, ಸಂಸದರ ವಿರುದ್ಧವೂ ಅಸಮಧಾನವ್ಯಕ್ತಪಡಿಸಿದರು. ಅಧಿಕಾರಿಗಳ ಬೇಜವಬ್ದಾರಿ ವಿರುದ್ಧ ಕಿಡಿಕಾರಿದರು. ಪ್ರತಿಭಟನಾ ಸ್ಥಳದಿಂದ ಕಿಲೋ ಮೀಟರ್ ದೂರದಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದು, ಹದಗೆಟ್ಟ ಹೆದ್ದಾರಿ ಜೊತೆ ಪ್ರತಿಭಟನೆಯ ಕಾವು ಏರಿದ್ದರಿಂದ ಆ ವಾಹನದಲ್ಲಿದ್ದವರೆಲ್ಲರೂ ಪರಿತಪಿಸಿದರು. ನೂರಾರು ಮಹಿಳೆಯರು ಸಹ ತಮ್ಮ ಮಕ್ಕಳ ಜೊತೆ ಪ್ರತಿಭಟನೆಗೆ ಆಗಮಿಸಿ ಸಮಸ್ಯೆ ಬಗ್ಗೆ ವಿವರಿಸಿದರು.
ಪ್ರತಿಭಟನೆಯ ಕಾವು ಏರಿದ ಕಾರಣ ಪೊಲೀಸರು ಹೈರಣಾದರು. ಹೆದ್ದಾರಿ ಮೂಲಕ ಸಂಚರಿಸಬೇಕಿದ್ದ ವಾಹನಗಳ ಮಾರ್ಗ ಬದಲಿಸಿದರು. ಶಿರಸಿ-ಬಿಸಿಲುಕೊಪ್ಪ ಮಾರ್ಗದಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧಿಸಿ, ಲಾರಿ-ಟಿಪ್ಪರಗಳಿಗೆ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳಿಗೆ ಮಳಗಿ-ದಾಸನಕೊಪ್ಪ-ಬನವಾಸಿ-ಶಿರಸಿ ಮಾರ್ಗವಾಗಿ ಸಂಚರಿಸಲು ಸೂಚಿಸಿದರು. ಹಾವೇರಿ ಕಡೆಯಿಂದ ಬರುವ ವಾಹನಗಳು ದಾಸನಕೊಪ್ಪ-ಬನವಾಸಿ- ಶಿರಸಿ ಮಾರ್ಗದಲ್ಲಿ ತೆರಳಬೇಕು ಎಂದು ಹೇಳಿದರು. ಅದಾದ ನಂತರ ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆಯಲಾಗಿದ್ದು, ಬೇಡಿಕೆ ಈಡೇರದೇ ಇದ್ದರೆ ಮತ್ತೊಮ್ಮೆ ಬೀದಿಗಿಳಿಯುವುದಾಗಿ ಜನ ಎಚ್ಚರಿಸಿದರು.