ಗ್ರಾಮ ಪಂಚಾಯತ ಕಚೇರಿ ಮೂಲಕ ಸರ್ಕಾರಿ ಯೋಜನೆ ಕೊಡಿಸುವುದಾಗಿ ಜನರನ್ನು ನಂಬಿಸಿದ ಮುಂಡಗೋಡು ಹುನಗುಂದದ ಪ್ರಶಾಂತ ಪಾಟೀಲ್ ಅನೇಕರಿಂದ ಹಣ ವಸೂಲಿ ಮಾಡಿದ್ದಾರೆ. ಆ ಸೌಲಭ್ಯ ಕೊಡಿಸದೇ ಅವರು ಪರಾರಿಯಾಗಿದ್ದಾರೆ.
ಮುಂಡಗೋಡು ಹುನಗುಂದದ ಗ್ರಾಮ ಪಂಚಾಯತ ಕಚೇರಿ ಬಳಿ ಪ್ರಶಾಂತ ಗುರುಪಾದಪ್ಪ ಪಾಟೀಲ ಅವರು ಸುಳಿದಾಡುತ್ತಿದ್ದರು. ಗ್ರಾಮ ಪಂಚಾಯತ ಕಚೇರಿ ಪ್ರವೇಶಿಸಿ ಅವರು ಅಲ್ಲಿ ಕೆಲಸ ಮಾಡುತ್ತಿದ್ದರು. ಗ್ರಾಮ ಪಂಚಾಯತಗೆ ಬರುವ ಜನರಿಗೆ ಪ್ರಶಾಂತ ಪಾಟೀಲ ಅವರು ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು. ಗಂಗಾ ಕಲ್ಯಾಣ, ವಿಧವಾ ವಸತಿ ಗೃಹ, ಆಶ್ರಯ ಯೋಜನೆ, ಅಂಗವಿಕಲ ವಿವಾಹ ಪ್ರೋತ್ಸಾಹಧನ ಹಾಗೂ ಅಲ್ಪ ಸಂಖ್ಯಾತರ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ ನೀಡುತ್ತಿದ್ದ ಪ್ರಶಾಂತ ಪಾಟೀಲ್ ಅವರು ಆ ಯೋಜನೆಯ ಫಲಾನುಭವಿಗಳಿಂದ ಅರ್ಜಿ ಸ್ವೀಕಾರ ಮಾಡುತ್ತಿದ್ದರು. ಜೊತೆಗೆ ಯೋಜನೆ ದೊರಕಿಸಿ ಕೊಡುವುದಾಗಿ ಹೇಳಿ ಹಣವನ್ನುಪಡೆಯುತ್ತಿದ್ದರು.
ಅದೇ ಊರಿನ ಫಕ್ಕಿರೇಶ್ ಶೇಖಪ್ಪ ಜಾದವ್ ಅವರು ಯೋಜನೆ ಪ್ರಯೋಜನಪಡೆಯಲು ಮೊದಲು 50 ಸಾವಿರ ರೂ ಕೊಟ್ಟಿದ್ದರು. ಅದಾದ ನಂತರ ಮತ್ತೆ 1 ಲಕ್ಷ ರೂ ಹಣ ನೀಡಿದ್ದರು. ಫಕ್ಕಿರೇಶ್ ಜಾದವ್ ಅವರು ಹಣ ನೀಡಿದನ್ನು ನೋಡಿ ಆ ಊರಿನ ಚನ್ನಬಸವ ಬಸವರಾಜ ಬೆಟದೂರು ಅವರಯ ಸಹ 50 ಸಾವಿರ ರೂ ಕೊಟ್ಟಿದ್ದರು. ಪತ್ತೆಸಾಬ್ ಚಮನಸಾಬ್ ಬೆಲವಂತರ ಅವರಿಂದ 70 ಸಾವಿರ ರೂ, ಚಂದ್ರಕಲಾ ಶ್ಯಾಮ್ ಬಗಾಯಿ ಅವರಿಂದ 50 ಸಾವಿರ ರೂ, ಇಮ್ತಿಯಾಜ್ ಅಹಮದ್ ಶೇಖ್ ಅವರಿಂದ 20 ಸಾವಿರ ರೂ, ರಮೇಶ ನಾಗಪ್ಪ ಹಡಪದ ಅವರಿಂದ 10 ಸಾವಿರ ರೂ, ಫಕ್ಕಿರೇಶ ಹರಿಜನ ಅವರಿಂದ 22 ಸಾವಿರ ರೂ ಹಾಗೂ ಬಸವರಾಜ ಹರಿಜನ ಅವರಿಂದ 22 ಸಾವಿರ ರೂಪಡೆದ ಪ್ರಶಾಂತ ಪಾಟೀಲ್ ಅವರು ಆ ಊರು ಬಿಟ್ಟರು.
ಸರ್ಕಾರಿ ಯೋಜನೆ ಲಾಭಪಡೆಯುವುದಕ್ಕಾಗಿ ಪ್ರಶಾಂತ ಪಾಟೀಲ್ ಅವರನ್ನು ನಂಬಿದ್ದ ಜನ ಮೋಸ ಹೋದರು. ಹಣ ಮರಳಿಸದೇ ಮೋಸ ಮಾಡಿದ ಪ್ರಶಾಂತ ಪಾಟೀಲ್ ವಿರುದ್ಧ ಪೊಲೀಸ್ ದೂರು ನೀಡಿದರು. ಒಟ್ಟು 394000ರೂ ಪಡೆದು ಮೋಸ ಮಾಡಿದ ಪ್ರಶಾಂತ ಪಾಟೀಲ್ ಅವರ ವಿರುದ್ಧ ಫಕ್ಕಿರೇಶ್ ಶೇಖಪ್ಪ ಜಾದವ್ ಅವರು ನೀಡಿದ ದೂರಿನ ಅನ್ವಯ ಮುಂಡಗೋಡು ಪೊಲೀಸರು ಪ್ರಕರಣ ದಾಖಲಿಸಿದರು.