ಸೊಪ್ಪಿನ ಬೆಟ್ಟ ಅತಿಕ್ರಮಣದ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದ ಸಿದ್ದಾಪುರ ಹುಲ್ಲುಂಡೆ ಬಳಿಯ ಗಣೇಶ ಹೆಗಡೆ ಅವರಿಗೆ ನೆಡಕಾರೆಮನೆಯ ಮಾದೇವ ಗೌಡ, ಅವರ ಮಗ ಅರುಣ ಗೌಡ ಸೇರಿ ಹಿಗ್ಗಾಮುಗ್ಗ ಹೊಡೆದಿದ್ದಾರೆ. ತಮ್ಮ ಮೇಲೆ ನಡೆದ ದಾಳಿಯ ಬಗ್ಗೆಯೂ ಗಣೇಶ ಹೆಗಡೆ ಅವರು ಪೊಲೀಸ್ ದೂರು ನೀಡಿದ್ದಾರೆ.
ಸಿದ್ದಾಪುರದ ಹುಲ್ಲುಂಡೆ ಕೊಡ್ನಮನೆ ಗಣೇಶ ತಿಮ್ಮಪ್ಪ ಹೆಗಡೆ (32) ಅವರು ವಾಸವಾಗಿದ್ದಾರೆ. ಹೆಗ್ಗರಣಿ ಗ್ರಾಮ ಪಂಚಾಯತ ವ್ಯಾಪ್ತಿಗೆ ಒಳಪಡುವ ಉಂಬಳಮನೆ ಹೋಬಳಿಯ ನೆಡಕಾರೆಮನೆ ಬಳಿ ಗಣೇಶ ಹೆಗಡೆ ಅವರ ತೋಟವಿದೆ. ಆ ತೋಟದ ವಹಿವಾಟಿಗಾಗಿ ಸೊಪ್ಪಿನ ಬೆಟ್ಟವಿದ್ದು, ಆ ಬೆಟ್ಟವನ್ನು ನೆಡಕಾರೆಮನೆಯ ಮಾದೇವ ಗೌಡ ಹಾಗೂ ಅವರ ಮಗ ಅರುಣ ಗೌಡ ಅತಿಕ್ರಮಿಸುವ ಪ್ರಯತ್ನ ಮಾಡಿದ್ದಾರೆ.
ಗದ್ದೆಗೆ ಮಣ್ಣು ಹಾಕುವ ವಿಷಯವಾಗಿ ಮಾದೇವ ಗೌಡ ಹಾಗೂ ಅರುಣ ಗೌಡ ಅವರು ಸೊಪ್ಪಿನ ಬೆಟ್ಟ ಅಗೆದಿದ್ದು, ಇದನ್ನು ಸಹಿಸದ ಗಣೇಶ ಹೆಗಡೆ ಅವರು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ. ಅದಾದ ನಂತರ ಅರಣ್ಯ ಇಲಾಖೆಯವರು ಅಲ್ಲಿಗೆ ಆಗಮಿಸಿ ಅತಿಕ್ರಮಣ ತಡೆದಿದ್ದಾರೆ. ಬೆಟ್ಟ ಅತಿಕ್ರಮಣ ನಡೆಸದಂತೆ ಗೌಡರ ಕುಟುಂಬಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ. ಅದರಿಂದ ಹೆಗಡೆಯವರ ವಿರುದ್ಧ ಗೌಡರಿಗೆ ದ್ವೇಷ ಶುರುವಾಗಿದ್ದು, ಹೊಡೆದಾಟದ ಮೂಲಕ ಸೇಡು ತೀರಿಸಿಕೊಂಡಿದ್ದಾರೆ.
ಮೇ 4ರಂದು ಗಣೇಶ ಹೆಗಡೆ ಅವರು ತೋಟಕ್ಕೆ ಗೊಬ್ಬರ ಹಾಕುವುದಕ್ಕಾಗಿ ಅಲ್ಲಿಗೆ ಹೋಗಿದ್ದರು. ಆಗ, ಎದುರಾದ ಮಾದೇವ ಗೌಡ ಹಾಗೂ ಅರುಣ ಗೌಡ ಏಕಾಏಕಿ ಆಕ್ರಮಣ ನಡೆಸಿದರು. ಗಣೇಶ ಹೆಗಡೆ ಅವರನ್ನು ಅಡ್ಡಗಟ್ಟಿ ಹಲ್ಲೆ ಮಾಡಿದರು. ಗಣೇಶ ಹೆಗಡೆ ಅವರ ಮುಖಕ್ಕೆ ಗಾಯ ಮಾಡಿದ್ದು, ಅವರ ಅಣ್ಣನನ್ನು ಕೊಲೆ ಮಾಡುವುದಾಗಿ ಬೆದರಿಸಿದರು.