ಶಿರಸಿಯಲ್ಲಿ ಕಾರೊಂದು ಬೈಕಿಗೆ ಹಿಂದಿನಿoದ ಗುದ್ದಿದ್ದು, ಇದೇ ವಿಷಯವಾಗಿ ಕಾರು ಹಾಗೂ ಬೈಕ್ ಮಾಲಕರ ನಡುವೆ ಹೊಡೆದಾಟ ನಡೆದಿದೆ. ಶಿರಸಿ ಗಣೇಶ ನಗರದ ಚಾಲಕ ರಕ್ಷಕ ನಾಯ್ಕ ಹಾಗೂ ಅವರ ತಂದೆ ಸೋಮಶೇಖರ ನಾಯ್ಕ ಅವರಿಗೆ ಚೌಡೇಶ್ವರಿ ಕಾಲೋನಿಯ ಅಭಿಷೇಕ ಕುರುಬರ್ ಹಾಗೂ ಅವರ ಕುಟುಂಬದವರು ಥಳಿಸಿದ್ದಾರೆ.
ಶಿರಸಿ ಗಣೇಶ ನಗರದ ಚಾಲಕ ರಕ್ಷಕ ಸೋಮಶೇಖರ ನಾಯ್ಕ (33) ಅವರು ವಾಸವಾಗಿದ್ದಾರೆ. ಚಾಲಕರಾಗಿ ಅವರು ದುಡಿಮೆ ಮಾಡಿಕೊಂಡಿದ್ದಾರೆ. ಮೇ 4ರಂದು ರಕ್ಷಕ ನಾಯ್ಕ ಅವರ ಇಂಟ್ರಾ ಕಾರು ರಿವರ್ಸ ತೆಗೆಯುವಾಗ ಬೈಕಿಗೆ ತಾಗಿದೆ. ಪರಿಣಾಮ ಚೌಡೇಶ್ವರಿ ಕಾಲೋನಿಯ ಅಭಿಷೇಕ ಕುರುಬರ್ ಅವರ ಬೈಕಿಗೆ ಹಾನಿಯಾಗಿದ್ದು, ಆ ಹಾನಿ ಭರಿಸಲು ಅಭಿಷೇಕ ಕುರುಬರ್ ಅವರು 2 ಸಾವಿರ ರೂ ಕೇಳಿದ್ದಾರೆ. ಆ ಹಣ ಕೊಡಲು ಒಪ್ಪದ ಕಾರಣ ಈ ಹೊಡೆದಾಟ ನಡೆದಿದೆ.
ಮೇ 5ರ ರಾತ್ರಿ ಗಣೇಶ ನಗರದ ಮಂಜುನಾಥ ಕಾಲೋನಿಯ ಹೈಸ್ಕೂಲ್ ಹತ್ತಿರ ರಕ್ಷಕ ನಾಯ್ಕ ಅವರು ಹೋಗುತ್ತಿದ್ದಾಗ ಅಲ್ಲಿಗೆ ಅಭಿಷೇಕ ಕುರುಬರ್ ಅವರು ಆಗಮಿಸಿದ್ದಾರೆ. ಬೈಕಿನ ಹಾನಿ ಭರಿಸಲು 2 ಸಾವಿರ ರೂ ಕೊಡುವಂತೆ ಕೇಳಿದ್ದಾರೆ. ಆಗ, ರಕ್ಷಕ ನಾಯ್ಕ ಅವರು 1 ಸಾವಿರ ರೂ ಮಾತ್ರ ಕೊಡುವುದಾಗಿ ಹೇಳಿದ್ದಾರೆ. ಇದರಿಂದ ಸಿಟ್ಟಾದ ಅಭಿಷೇಕ ಕುರುಬರ್ ಅವರು ಕಿರಣ ಲೋಕೇಶ ಕುರುಬರ್, ಲೋಕೇಶ ಕುರುಬರ ಅವರನ್ನು ಫೋನ್ ಮಾಡಿ ಕರೆಯಿಸಿದ್ದಾರೆ. ಅವರೆಲ್ಲರೂ ಸೇರಿ ರಕ್ಷಕ ನಾಯ್ಕ ಅವರ ಮೇಲೆ ಆಕ್ರಮಣ ಮಾಡಿದ್ದಾರೆ. ಕೆಟ್ಟದಾಗಿ ನಿಂದಿಸಿ ಹೊಡೆದಿದ್ದಾರೆ.
ಈ ವೇಳೆ ರಕ್ಷಕ ನಾಯ್ಕ ಅವರ ತಂದೆ ಸೋಮಶೇಖರ್ ಅವರು ಸ್ಥಳಕ್ಕೆ ಆಗಮಿಸಿ ಜಗಳ ಬಿಡಿಸುವ ಪ್ರಯತ್ನ ಮಾಡಿದ್ದಾರೆ. ಅಭಿಷೇಕ ಕುರುಬರ್ ಹಾಗೂ ಅವರ ಸಹಚರರು ಸೋಮೇಶೇಖರ್ ಅವರಿಗೂ ಕಲ್ಲಿನಿಂದ ಹೊಡೆದಿದ್ದಾರೆ. ಎದೆ ಮೇಲೆ ಹತ್ತಿ ಕುಣಿದು ನೋವು ಮಾಡಿದ್ದಾರೆ.