ಕಾರವಾರದ ತೋಡೂರಿನ ಬಳಿ ಪ್ರದೀಪ ಪೂಜಾರಿ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರದೀಪ ಪೂಜಾರಿ ಅವರು ಅವರ ಎರಡನೇ ಪತ್ನಿ ಪೂಜಾ ಕಡೆಕರ್ ಅವರ ಕಾಟ ಸಹಿಸಲಾಗದೇ ಆತ್ಮಹತ್ಯೆಗೆ ಶರಣಾಗಿರುವುದು ವಾಟ್ಸಪ್ ಸಂದೇಶದಿoದ ಗೊತ್ತಾಗಿದೆ.
ಕುಂದಾಪುರ ಮೂಲದ ಪ್ರದೀಪ ಸೋಮಾ ಪೂಜಾರಿ ಅವರು ಅದೇ ಊರಿನ ಮಂಗಳಾ ಪೂಜಾರಿ ಅವರನ್ನು ವಿವಾಹವಾಗಿದ್ದರು. ಅನ್ಯೋನ್ಯವಾಗಿದ್ದ ಈ ದಂಪತಿ ಒಂದಷ್ಟು ವರ್ಷ ಚನ್ನಾಗಿಯೇ ಇದ್ದರು. ಎಂಟು ತಿಂಗಳ ಹಿಂದೆ ಪ್ರದೀಪ ಪೂಜಾರಿ ಅವರು ಮಂಗಳಾ ಪೂಜಾರಿ ಅವರಿಗೆ ಡೈವರ್ಸ ಕೊಟ್ಟಿದ್ದರು. ಅದಾದ ನಂತರ ಕಾರವಾರದ ಮಾಜಾಳಿಯ ಪೂಜಾ ಮಹೇಂದ್ರ ಕಡೇಕರ್ ಅವರನ್ನು ಮದುವೆ ಆಗಿದ್ದರು.
ಈ ಘಟನಾವಳಿಗಳ ಬಳಿಕ ಮಂಗಲಾ ಪೂಜಾರಿ ಅವರು ಪ್ರದೀಪ ಪೂಜಾರಿ ಅವರ ಜೊತೆ ಮಾತು ಬಿಟ್ಟಿದ್ದರು. ಆದರೆ, ಪ್ರದೀಪ ಪೂಜಾರಿ ಅವರು ಆಗಾಗ ಮಕ್ಕಳ ಜೊತೆ ಮಾತನಾಡುತ್ತಿದ್ದರು. ಎರಡನೇ ಮದುವೆ ನಂತರ ಪ್ರದೀಪ ಪೂಜಾರಿ ಅವರು ಪೂಜಾ ಕಡೆಕರ್ ಅವರ ಜೊತೆ ತೋಡೂರಿನ ಸೋನಾರವಾಡದಲ್ಲಿ ವಾಸವಾಗಿದ್ದರು. ಪೂಜಾ ಕಡೇಕರ್ ಅವರು ಸಹ ವಿವಾಹ ವಿಚ್ಚೇದಿತರಾಗಿದ್ದು, ಈಗಾಗಲೇ ಮಂಗಲಾ ಪೂಜಾರಿ ಅವರಿಂದ ದೂರವಾಗಿದ್ದ ಪ್ರದೀಪ ಪೂಜಾರಿ ಅವರಿಗೆ ಹತ್ತಿರವಾಗಿದ್ದರು. ಆದರೆ, ಕೆಲ ದಿನಗಳ ನಂತರ ಅವರಿಬ್ಬರ ನಡುವೆಯೂ ವೈಮನಸ್ಸು ಕಾಣಿಸಿತು.
ಮೇ 3ರಂದು ಪ್ರದೀಪ ಪೂಜಾರಿ ಅವರು ಮಂಗಲಾ ಪೂಜಾರಿ ಅವರಿಗೆ ವಾಟ್ಸಪ್ ಮೂಲಕ ಮೆಸೆಜ್ ಮಾಡಿದ್ದರು. ಆ ಧ್ವನಿ ಸಂದೇಶದಲ್ಲಿ ಪೂಜಾ ಕಡೇಕರ್ ಅವರು ಕಾಟ ಕೊಡುವ ಬಗ್ಗೆ ತಿಳಿಸಿದ್ದರು. ಆದರೆ, ಮಂಗಲಾ ಪೂಜಾರಿ ಅವರು ಇದಕ್ಕೆ ಪ್ರತಿಕ್ರಿಯಿಸಿರಲಿಲ್ಲ. ಮೇ 4ರಂದು ಸಹ ಪ್ರದೀಪ ಪೂಜಾರಿ ಅವರು ಮತ್ತೆ ಮೆಸೆಜ್ ಮಾಡಿ ಆತ್ಮಹತ್ಯೆಗೆ ಶರಣಾಗುವ ಬಗ್ಗೆ ಹೇಳಿದ್ದರು. ಎರಡನೇ ಪತ್ನಿ ತೊಂದರೆ ಕೊಡುವ ಕಾರಣ ಸಾವಿಗೆ ಶರಣಾಗುತ್ತಿದ್ದು, ಸಾವಿನ ನಂತರ ಈ ವಿಷಯವನ್ನು ಪೊಲೀಸರಿಗೆ ಹೇಳುವಂತೆ ಮನವಿ ಮಾಡಿದ್ದರು. ಆದರೆ, ಈ ಸಂದೇಶವನ್ನು ಸಹ ಮಂಗಲಾ ಪೂಜಾರಿ ಅವರು ಗಂಭೀರವಾಗಿ ಪರಿಗಣಿಸಿರಲಿಲ್ಲ.
ಮೇ 5ರಂದು ಮತ್ತೊಮ್ಮೆ ಮೆಸೆಜ್ ಮಾಡಿ, ಪ್ರದೀಪ ಪೂಜಾರಿ ಅವರು ಆತ್ಮಹತ್ಯೆಗೆ ಶರಣಾದರು. ತೋಡೂರಿನ ಮನೆ ಮಾಲಕರು ಮಂಗಲಾ ಪೂಜಾರಿ ಅವರಿಗೆ ಫೋನ್ ಮಾಡಿ ವಿಷಯ ಮುಟ್ಟಿಸಿದ್ದು, ಮುರುಡೇಶ್ವರದಲ್ಲಿದ್ದ ಮಂಗಲಾ ಪೂಜಾರಿ ಅವರು ಕಾರವಾರಕ್ಕೆ ದೌಡಾಯಿಸಿದರು. ಪ್ರದೀಪ ಪೂಜಾರಿ ಅವರ ಸಾವಿಗೆ ಪೂಜಾ ಕಡೆಕರ್ ಅವರೇ ಕಾರಣರಾಗಿರುವ ಬಗ್ಗೆ ಅವರು ಪೊಲೀಸರಿಗೆ ಹೇಳಿದ್ದು, ಕಾರವಾರ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದರು.