ಶಿರಸಿ-ಸಿದ್ದಾಪುರ ಮಾರ್ಗವಾಗಿ ಚಲಿಸುತ್ತಿದ್ದ ಶಾಸಕ ಭೀಮಣ್ಣ ನಾಯ್ಕ ಅವರು ಭಾನುವಾರ ಅದೇ ದಾರಿಯಲ್ಲಿ ಅಪಘಾತವಾಗಿರುವುದನ್ನು ನೋಡಿದ್ದು, ತಮ್ಮದೇ ಕಾರಿನಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ಕಳುಹಿಸಿದ್ದಾರೆ. ಅದಾದ ನಂತರ ಬೇರೆ ವಾಹನದ ಮೂಲಕ ಅವರು ಮುಂದಿನ ಪ್ರಯಾಣ ಬೆಳೆಸಿದ್ದಾರೆ.
ತುರ್ತು ಕೆಲಸದ ನಿಮಿತ್ತ ಭೀಮಣ್ಣ ನಾಯ್ಕ ಅವರು ಸಿದ್ದಾಪುರದ ಕಡೆ ಹೊರಟಿದ್ದರು. ಮಾರ್ಗ ಮಧ್ಯೆ ಅಪಘಾತವೊಂದನ್ನು ಅವರು ನೋಡಿ, ತಮ್ಮ ಕಾರು ನಿಲ್ಲಿಸಿದರು. ಗಾಯಾಳುವಿನ ಕ್ಷೇಮ ವಿಚಾರಿಸಿದ ಅವರು ಆಂಬುಲೆನ್ಸ್ ಬರುವುದು ತಡವಾಗಲಿದೆ ಎಂಬ ಸತ್ಯ ಅರಿತರು. ತಕ್ಷಣ ತಮ್ಮ ಕಾರನ್ನೇ ಆಂಬುಲೆನ್ಸ್ ಆಗಿ ಬದಲಿಸಿ, ಗಾಯಾಳುವನ್ನು ಆಸ್ಪತ್ರೆಗೆ ಕಳುಹಿಸಿದರು.
ಗಂಭೀರ ಗಾಯಗೊಂಡ ವ್ಯಕ್ತಿಯ ಬಗ್ಗೆ ಭೀಮಣ್ಣ ನಾಯ್ಕ ಅವರು ವೈದ್ಯರಿಗೆ ಫೋನ್ ಮಾಡಿದರು. ಗಾಯಾಳುವಿಗೆ ಸೂಕ್ತ ಚಿಕಿತ್ಸೆ ಕೊಡುವಂತೆ ಸೂಚನೆ ನೀಡಿದರು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಅದರ ವೆಚ್ಚವನ್ನು ಪಾವತಿಸುವ ಭರವಸೆ ನೀಡಿದರು. ಅದಾದ ನಂತರ ಮತ್ತೊಂದು ವಾಹನದ ಮೂಲಕ ಭೀಮಣ್ಣ ನಾಯ್ಕ ಅವರು ಮುಂದಿನ ಪ್ರಯಾಣ ಬೆಳೆಸಿದರು.